ಉಚಿತ ತರಬೇತಿಯ ಬಸವಧಾಮ
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾಹಿತಿ | ಸೆಂಟರ್ ಆಫ್ ಎಕ್ಸಲೆನ್ಸ್ ಪ್ರಾರಂಭ ಶೀಘ್ರ
| ಬೆಳಗಾವಿ-ಧಾರವಾಡ ಮಧ್ಯದಲ್ಲಿ ಆರಂಭ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದ ಬಡ ಪ್ರತಿಭಾನ್ವಿತ ಮಕ್ಕಳಿಗೆ ಅನುಕೂಲವಾಗಲೆಂದು ಬೆಳಗಾವಿ-ಧಾರವಾಡ ಮಧ್ಯದಲ್ಲಿ ಬಸವಧಾಮ ಸೆಂಟರ್ ಆಫ್ ಎಕ್ಸಲೆನ್ಸ್ ಸಂಸ್ಥೆ ಪ್ರಾರಂಭಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪ್ರತಿಭೆ ಇದ್ದರೂ, ಸೂಕ್ತ ತರಬೇತಿ ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಬಸವಧಾಮ ಸೆಂಟರ್ ಆಫ್ ಎಕ್ಸಲೆನ್ಸ್ ಸಂಸ್ಥೆ ವರ್ಗ, ಮತ, ಲಿಂಗ ಭೇದವಿಲ್ಲದೆ ಗುಣಮಟ್ಟದ ತರಬೇತಿ, ಮಾರ್ಗದರ್ಶನ,ನಾಯಕತ್ವ ಗುಣ ಬೆಳೆಸುವ ಯೋಜನೆ ರೂಪಿಸಲಾಗಿದೆ ಎಂದರು.
ಪ್ರವೇಶ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು ತರಬೇತಿಗೆ ಕೇವಲ ೧ ರೂ. ನೀಡಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಯುಪಿಎಸ್ಸಿ, ಕೆಪಿಎಸ್ಸಿ, ಬ್ಯಾಂಕಿAಗ್, ನ್ಯಾಯಾಂಗ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಪಠ್ಯಕ್ರಮದ ಸಮಗ್ರ ಬೋಧನೆ, ಪೂರ್ವಭಾವಿ, ಮುಖ್ಯಪರೀಕ್ಷೆ ಹಾಗೂ ಸಂದರ್ಶನಕ್ಕೆ ಸಂಯೋಜಿತ ತಯಾರಿ ಸೇರಿ ಒಟ್ಟು ೧೮ ತಿಂಗಳು ತರಬೇತಿ ನೀಡಲಾಗುವುದು ಎಂದರು.
ರಾಜ್ಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಲಕ್ಷಾಂತರ ರೂ. ವೆಚ್ಚದೊಂದಿಗೆ ದೂರದ ದೆಹಲಿ, ಚನೈ, ಅಹ್ಮದಾಬಾದ ನಂತಹ ನಗರಗಳಿಗೆ ತೆರಳುತ್ತಾರೆ. ಇಲ್ಲಿಯಂತೆ ಗುಣಮಟ್ಟದ ತರಬೇತಿ ನೀಡಲು ೧೫೦ ಕೋಟಿ ರೂ. ವೆಚ್ಚದಲ್ಲಿ ಸಾವಿರ ವಿದ್ಯಾರ್ಥಿ ಮತ್ತು ಸಾವಿರ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸಲಾಗುವುದು. ದಿವ್ಯಾಂಗ, ಅನಾಥರು, ತೃತೀಯ ಲಿಂಗಿಗಳಿಗೂ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಊಟ ಸೇರಿದಂತೆ, ಅಧ್ಯಯನ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಸಮಾಜದ ಪ್ರತಿಯೊಬ್ಬರು ಈ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಪ್ರತಿಭೆ ಪ್ರೋತ್ಸಾಹಿಸುವ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಸವಧಾಮ ಸೆಂಟರ್ ಆಫ್ ಎಕ್ಸಲೆನ್ಸ್ ಸಂಸ್ಥೆ ಕಾರ್ಯದರ್ಶಿ ಜಗದೀಶ ನಾಯಿಕ, ರಾಚನಗೌಡ ಮುತ್ನಾಳ ಇತರರಿದ್ದರು.
-----------
ಬಾಕ್ಸ್-೧
ದಾನಿಗಳ ಸಹಾಯ ಹಸ್ತ
ಬಸವಧಾಮ ಸೆಂಟರ್ ಆಫ್ ಎಕ್ಸಲೆನ್ಸ್ ಸಂಸ್ಥೆಗೆ ವಿಆರ್ಎಲ್ ಸಮೂಹ ಸಂಸ್ಥೆ ಅಧ್ಯಕ್ಷ ವಿಜಯ ಸಂಕೇಶ್ವರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಲಾ ಒಂದು ಕೋಟಿ ರೂ. ಸಹಾಯಧನ ನೀಡುವ ವಾಗ್ದಾನ ಮಾಡಿದ್ದಾರೆ. ಜತೆಗೆ ಹಲವು ಗಣ್ಯರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಿದ್ದಲ್ಲಿ ಸಂಸ್ಥೆ ಶೀಘ್ರ ಕಾರ್ಯಾರಂಭ ಮಾಡಲಾಗುವುದು.
| ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ
ಕನ್ಹೇರಿಮಠ,