ಬೆಳಗಾವಿ ಲಿಂಗರಾಜ ಕಾಲೇಜಿನ ಸಮಾರಂಭದಲ್ಲಿ ಶುಕ್ರವಾರ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಸಿ. ರಾಜಶೇಖರರನ್ನು ಸನ್ಮಾನಿಸಲಾಯಿತು. ಡಾ.ಎಚ್.ಎಸ್.ಮೇಲಿನಮನಿ, ಕರ್ನಲ್ ಸುನೀಲ ದಾಗರ, ಡಾ.ಮಹೇಶ ಗುರನಗೌಡರ, ಡಾ.ಸಿ.ರಾಮರಾವ್ ಇದ್ದರು.
ಬೆಳಗಾವಿ : ಯುವಕರು ಜೀವನದಲ್ಲಿ ಸಾಧನೆ ಮಾಡಿ. ಇಂದಿನ ತಾಂತ್ರಿಕಯುಗದಲ್ಲಿ ಜ್ಞಾನವಂತರಾಗಿ ಬೆಳೆದು ದೇಶ ಸೇವೆಯಲ್ಲಿ ತೊಡಗಬೇಕು. ಅದಕ್ಕೆ ಮುಖ್ಯವಾಗಿ ಶಿಸ್ತು ಅಗತ್ಯವಾಗಿದ್ದು, ಜೀವನದ ಪ್ರತಿಹಂತದಲ್ಲೂ ಶಿಸ್ತು ಅಳವಡಿಸಿಕೊಳ್ಳಬೇಕು. ಭಾರತೀಯ ಸೇವೆಯಲ್ಲಿ ಸಾಕಷ್ಟು ಅವಕಾಶಗಗಳಿದ್ದು, ಅದನ್ನು ಪಡೆಯಲು ಸತತ ಪ್ರಯತ್ನ ಇರಬೇಕು ಎಂದು ಬೆಳಗಾವಿ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಸಿ. ರಾಜಶೇಖರ ಹೇಳಿದರು.
ಲಿಂಗರಾಜ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳಲ್ಲಿ ಕನಸುಗಳಿರಬೇಕು. ಅದನ್ನು ಮುಟ್ಟುವವರೆಗೆ ಕಷ್ಟಪಟ್ಟು ಪ್ರಯತ್ನಿಸಬೇಕು. ಕಾಲೇಜ್ ಜ್ಞಾನವನ್ನು ನೀಡುತ್ತವೆ, ಅದನ್ನು ಪಡೆದು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಲಿಂಗರಾಜ ಕಾಲೇಜು ಹೆಸರಾಂತ ಪದವಿ ಕಾಲೇಜ್ ಆಗಿದೆ. ಹೀಗಾಗಿ, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ, ಪಾಲಕರ ಹಾಗೂ ಕಾಲೇಜಿನ ಕೀರ್ತಿ ಹೆಚ್ಚಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಜಾಗತಿಕ ತಂತ್ರಜ್ಞಾನ ಬದಲಾಗುತ್ತಿದೆ. ಅದರ ವೇಗಕ್ಕೆ ಅನುಗುಣವಾಗಿ ಕೂಡ ಬದಲಾಗುವುದು ಅಗತ್ಯವಾಗಿದೆ. ಇಂದಿನ ವೇಗಕ್ಕೆ ತಕ್ಕದಾಗಿ ಆಲೋಚಿಸುವ ಹಾಗೂ ಮುನ್ನಡೆಯುವುದನ್ನು ಕಲಿಯಬೇಕು. ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಭಾರತೀಯ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುವಂತಾಗಬೇಕು. ಎನ್‌ಸಿಸಿ ಕೆಡೆಟ್‌ಗಳಲ್ಲಿ ಶಿಸ್ತು ಹಾಗೂ ಸಂಘಟನೆಯನ್ನು ಕಲಿಸುತ್ತದೆ. ಅವರ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ತಿಳಿಸಿದರು.
ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಅಧ್ಯಕ್ಷತೆ ವಹಿಸಿದ್ದರು. 26 ಕರ್ನಾಟಕ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಸುನೀಲ ದಾಗರ, ಮೇಜರ್ ಡಾ.ಮಹೇಶ ಗುರನಗೌಡರ, ಕ್ಯಾಪ್ಟನ್ ಡಾ.ಶಿವಾನಂದ ಬುಲಬುಲೆ, ಚಂದ್ರಶೇಖರ ಸವಡಿ ಇತರರಿದ್ದರು. ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ವಿನಾಯಕ ವರೂಟೆ, ಸಿ.ಎಸ್.ಪಾಟೀಲ, ಪ್ರೊ.ನಿಕಿತಾ ಬೇಡರ ಮತ್ತು ಪ್ರೊ.ಸಿದ್ದಗೌಡ ಪಾಟೀಲ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್ ವಂದಿಸಿದರು. ಪ್ರೊ.ಶ್ರದ್ಧಾ ಜೋಶಿ ವರದಿ ವಾಚಿಸಿದರು.