ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಂಗಳವಾರ ಹೋಳಿ ಹಬ್ಬದ ನಿಮಿತ್ತ ಯುವಕರು, ಯುವತಿಯರು, ಮಹಿಳೆಯರು, ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಬಣ್ಣದಾಟದಲ್ಲಿ ಮುಳುಗೆದ್ದರು. ಪರಸ್ಪರ ಬಣ್ಣ ಹಚ್ಚಿ, ಸಂಗೀತ ನಾದಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನಗರದ ವ್ಯಾಕ್ಸಿನ್ ಡಿಪೋ ಮೈದಾನ, ಸಿಪಿಇಡಿ ಮೈದಾನ, ಸರ್ಕಾರಿ, ಖಾಸಗಿ ಶಾಲಾ ಕಾಲೇಜು ಮೈದಾನ ಸೇರಿ ಗಣಪತಿ ಗಲ್ಲಿ, ಖಡೇ ಬಜಾರ್‌ವರೆಗೆ, ಶಹಾಪುರದಿಂದ ಖಾಸಬಾಗವರೆಗೆ, ಮಾರುತಿ ಗಲ್ಲಿ, ಗೋಂಧಳಿ ಗಲ್ಲಿ, ನಾರ್ವೇಕರ ಗಲ್ಲಿ, ಚವಾಟ್‌ಗಲ್ಲಿ ಸೇರಿ ವಿವಿಧೆಡೆ ಬಣ್ಣದಾಟ ಜೋರಾಗಿ ನಡೆಯಿತು. ಮುಖಕ್ಕೆ ಬಣ್ಣ ಬಳಿದುಕೊಂಡಿದ್ದ ಯುವಕರು ಘೋಷಣೆ ಕೂಗುತ್ತ ಸಂಭ್ರಮಿಸಿದರು.
ಹಲವೆಡೆ ಯುವಕರು ಡಿಜೆ ನಾದಕ್ಕೆ ಹೆಜ್ಜೆ ಹಾಕಿದರು. ನಗರದ ಪಾಂಗುಳ ಗಲ್ಲಿಯ ಜೈನ ಮಂದಿರದಿಂದ ಅಶ್ವತ್ಥಾಮ ಮಂದಿರದವರೆಗೆ ನೂರಾರು ಯುವಕರು ಉರುಳುಸೇವೆ ಸಲ್ಲಿಸಿ, ಹರಕೆ ತೀರಿಸಿದರು.
ಮಕ್ಕಳು ಪಿಚಕಾರಿಗಳಿಂದ ಬಣ್ಣದ ನೀರು ಸಿಂಪಡಿಸಿ ಸಂಭ್ರಮಿಸಿದರು. ಮಹಿಳೆಯರು ಕೂಡ ಸಂಭ್ರಮದಲ್ಲಿ ಪಾಲ್ಗೊಂಡರು. ಬೀದಿಬೀದಿಗಳಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ ನೆರವೇರಿಸಲಾಯಿತು.