ಚಿಕ್ಕೋಡಿ ಪಟ್ಟಣದ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಯೋಗ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಂಪಾದನಾ ಸ್ವಾಮೀಜಿ, ಜಗದೀಶ ಕವಟಗಿಮಠ, ಡಾ.ಕಿರಣಕುಮಾರ ಮುತ್ನಾಳಿ ಇತರರಿದ್ದರು. 
ಬೆಳಗಾವಿ

ಆರೋಗ್ಯ ವೃದ್ಧಿಗೆ ಯೋಗ ಸಹಕಾರಿ

ಚಿಕ್ಕೋಡಿ: ಯೋಗ ಆರೋಗ್ಯ ಕಾಪಾಡುವ ಹಾಗೂ ರೋಗ ನಿವಾರಣೆಗೆ ಮಾರ್ಗದರ್ಶಿಯಾದ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದ್ದು, ಪ್ರತಿಯೊಬ್ಬರೂ ಯೋಗ ವಿಧಾನ ಅನುಸರಿಸುವುದು ಅಗತ್ಯ ಎಂದು ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.
ಪಟ್ಟಣದ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಭಾರತ ಸರ್ಕಾರದ ಆಯುಷ್ ಸಚಿವಾಲಯ, ಮುರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಆಶ್ರಯದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನ ಪೂರ್ವಭಾವಿ ಅಂಗವಾಗಿ ಯೋಗ ಮಹೋತ್ಸವ ವಿಶೇಷ 39ನೇ ದಿನದ ಕೌಂಟ್‌ಡೌನ್ (100 ದಿನ) ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ವೈಯಕ್ತಿಕವಾಗಿ, ಸಾಮಾಜಿಕವಾಗಿ ಪರಿವರ್ತನೆ ತರಲು ಸಾಧ್ಯ ಎಂದರು.
ಸಮಾಜದಲ್ಲಿ ಯೋಗದ ಅರಿವು ಮೂಡಿಸಲು ಹಾಗೂ ಯುವ ಪೀಳಿಗೆಯನ್ನು ಆರೋಗ್ಯಕರ ಜೀವನಶೈಲಿಯತ್ತ ಪ್ರೇರೇಪಿಸಲು ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯ ಕೈಗೊಂಡಿರುವ ಕಾರ್ಯ ಶ್ಲಾಸಿದರು.
ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ಮಾತನಾಡಿದರು. ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಮುಖ್ಯಸ್ಥ ಡಾ.ಸಂತೋಷ ಶಿವಣ್ಣವರ ಕಾರ್ಯಕ್ರಮ ಯಶಸ್ವಿಯಾಗಿಸಿದರು.
ನಿಂಗಪ್ಪ ಪೂಜಾರಿ ನಿರೂಪಿಸಿದರು. ಡಾ.ಸುಧೀಂದ್ರ ಹೊನವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರವಿ ಮಡಿವಾಳರ ವಂದಿಸಿದರು. ಕೆಎಲ್‌ಇ ಅಂಗ ಸಂಸ್ಥೆ ಪ್ರಾಚಾರ್ಯರು, ವಿದ್ಯಾರ್ಥಿಗಳು ಆಯುರ್ವೇದ ಕಾಲೇಜಿನ ಉಪನ್ಯಾಸಕರು, ವೈದ್ಯರು ಹಾಗೂ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.