ಬೆಳಗಾವಿ : ತಾಲೂಕಿನ ಮಚ್ಛೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ಕಪ್ಪು ಮಸಿ ಎರಚಲಾಗಿದೆ ಎಂಬ ಪ್ರಕರಣದ ಸತ್ಯಾಸತ್ಯತೆ ಆರ್‌ಎಫ್‌ಎಸ್‌ಎಲ್ ವರದಿಯಿಂದ ಬಹಿರಂಗಗೊಂಡಿದ್ದು, ಇದು ಯಾವುದೇ ಕಪ್ಪು ಮಸಿ ಅಥವಾ ಬಣ್ಣವಲ್ಲದೇ, ಪ್ರತಿಮೆ ಹಿಂಭಾಗದಲ್ಲಿರುವ ಮರದ ಅಂಟಿನ ರಸ ಎಂಬುದು ಸಾಬೀತಾಗಿದೆ.
ಮೂರ್ತಿಯ ಮೇಲೆ, ಮೂರ್ತಿ ಹತ್ತಿರದ ರಸ್ತೆ ಹಾಗೂ ಹಿಂಭಾಗದಲ್ಲಿರುವ ಮರದ ಎಲೆಗಳ ಮೇಲೆ ಬಿದ್ದಿರುವ ಅಂಟಿನ ರೀತಿಯ ಪದಾರ್ಥವನ್ನು ಸಂಗ್ರಹಿಸಿ ಆರ್‌ಎಫ್‌ಎಸ್‌ಎಲ್‌ಗೆ ರವಾನಿಸಲಾಗಿತ್ತು. ಸದ್ಯ ಇದರ ವರದಿ ನಮ್ಮ ಕೈ ಸೇರಿದ್ದು, ಮೂರು ಸ್ಥಳಗಳಲ್ಲಿ ಸಂಗ್ರಹಿಸಿದ ಮಾದರಿಗಳು ಮರದ ಅಂಟು ದ್ರಾವಣವಾಗಿದೆ ಎಂಬುದು ಸ್ಪಷ್ಟಗೊಂಡಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷನ ಬೋರಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಗಳಲ್ಲಿಯೂ ಮೂರ್ತಿ ಹತ್ತಿರಕ್ಕೆ ಬಂದು ಯಾವುದೇ ವಸ್ತು ಎರಚಿರುವ ದೃಶ್ಯಗಳು ದಾಖಲಾಗಿಲ್ಲ. ಹೀಗಾಗಿ ಮಸಿ ಎಂದು ಊಹಿಸಲಾಗಿದ್ದ ಪದಾರ್ಥ ಮರದ ಎಲೆಯ ಅಂಟಾಗಿದ್ದು, ಇದು ಯಾವುದೇ ಕಿಡಿಗೇಡಿಗಳ ಕೃತ್ಯವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.