ಬೆಳಗಾವಿಯಲ್ಲಿ ಭಾನುವಾರ ತುರಮರಿ ಕಸ ವಿಲೇವಾರಿ ಘಟಕ ತೆರವಿಗೆ ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮನವಿ ಸಲ್ಲಿಸಲಾಯಿತು. ಚಂದ್ರಕಾಂತ ಜಾಧವ, ಪುಂಡಲೀಕ ಖಾಂಡೇಕರ, ನಾಗರಾಜ ಜಾಧವ, ಸೋಮನಾಥ ಬೆಳಗಾಂವಕರ, ಬಾಳು ಅಷ್ಟೇಕರ ಇತರರಿದ್ದರು. 
ಬೆಳಗಾವಿ

ನಗರದ ಕಸ ಗ್ರಾಮೀಣಕ್ಕೇಕೆ?

ಬೆಳಗಾವಿ: ತುರಮರಿ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಹಳ್ಳಿಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ಪಾಲಿಕೆ ವ್ಯಾಪ್ತಿಯಲ್ಲೇ ವಿಲೇವಾರಿಯಾಗಲಿ. ನಗರದ ಕಸ ಗ್ರಾಮೀಣ ಕ್ಷೇತ್ರಕ್ಕೆ ಏಕೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ತುರಮರಿ ಕಸ ವಿಲೇವಾರಿ ಘಟಕ ತೆರವಿಗೆ ಆಗ್ರಹಿಸಿ ಭಾನುವಾರ ಹಿಂಡಲಗಾ ಕಲ್ಮೇಶ್ವರ ಮಂದಿರದಿಂದ ಗೃಹ ಕಚೇರಿವರೆಗೆ ಮೆರವಣಿಗೆ ಯಲ್ಲಿ ಆಗಮಿಸಿದ ತುರಮರಿ, ಉಚಗಾವಿ, ಕೊನೆವಾಡಿ, ಕಲ್ಲೆಹೊಳ, ಬಸುರ್ತೆ, ಹಿಂಡಲಗಾ, ಸುಳಗಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಈ ಘಟಕದಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಜನರಿಗೆ ಕ್ಯಾನ್ಸರ್ ಸಹಿತ ಅನೇಕ ರೋಗ ಬಂದಿವೆ. ಇದಕ್ಕೆ ಪಾಲಿಕೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಮೇಯರ್, ಉಪಮೇಯರ್, ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರು, ಸಂಸದ ಜಗದೀಶ ಶೆಟ್ಟರ ನಿವಾಸದ ಎದುರಿಗೆ ಕಸವಿಟ್ಟು ಪ್ರತಿಭಟನೆ ಮಾಡೋಣ. ನಾನೂ ಕೈಜೋಡಿಸುತ್ತೇನೆ. ನಾಲ್ಕು ಭಾಗಗಳಲ್ಲಿ ಕಸ ಘಟಕ ಮಾಡುವ ಬಗ್ಗೆ ಪ್ರಸ್ತಾವ ಇಟ್ಟಿದ್ದೇವೆ. ಏ.9ರ ನಂತರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶಗೆ ವಿಡಿಯೋ ಕಾಲ್ ಮಾಡಿ ಸೇರಿದ್ದ ಜನರನ್ನು ತೋರಿಸಿ, ತಾವು ಸಲ್ಲಿಸಿರುವ ಪ್ರಸ್ತಾವಗಳಿಗೆ ಅನುಮೋದನೆ ನೀಡಲು ಕೇಳಿಕೊಂಡರು.
ಚಂದ್ರಕಾಂತ ಜಾಧವ, ಪುಂಡಲೀಕ ಖಾಂಡೇಕರ, ನಾಗರಾಜ ಜಾಧವ, ಸೋಮನಾಥ ಬೆಳಗಾಂವಕರ, ಪುಂಡಲೀಕ ಬೆಳಗಾಂವಕರ, ಸುನೀಲ ಬೆಳಗುಂದಕರ, ಕಾಡಾ ಅಧ್ಯಕ್ಷ ಯುವರಾಜ ಕದಂ, ಬಾಳು ಅಷ್ಟೇಕರ, ರವಿ ಕೋಕಿತಕರ ಇತರರಿದ್ದರು.
ದಕ್ಷಿಣ ಶಾಸಕರೇ ಪಾಲಿಕೆ ಹೆಡ್
ತ್ಯಾಜ್ಯ ವಿಲೇವಾರಿ ಹೊಸ ಘಟಕಕ್ಕೆ ನಾಲ್ಕು ಕಡೆ ಜಾಗ ಗುರುತಿಸಲು ಮೊದಲೇ ಹೇಳಿದ್ದೇನೆ. ಪಾಲಿಕೆ ಮೇಯರ್ ತಮ್ಮದೇ ರಾಜ್ಯಭಾರ ಮಾಡುತ್ತಾರೆ. ಉಸ್ತುವಾರಿ ಸಚಿವ, ಡಿಸಿಯನ್ನೂ ಭೇಟಿಯಾಗುವುದಿಲ್ಲ. ಸಿಎಂ ಬಂದಾಗಲೂ ಬರುವುದಿಲ್ಲ. ದಕ್ಷಿಣ ಶಾಸಕರೇ ಪಾಲಿಕೆ ಹೆಡ್ ಆಗಿದ್ದಾರೆ. ಅವರೇ ಈ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.