ಶೂ ಸಾಕ್ಸ್ 
ಬೆಳಗಾವಿ

ಇದುವರೆಗೂ ಶೂ, ಸಾಕ್ಸ್ ಕೊಟ್ಟಿಲ್ಲವೇಕೆ?

ಬೆಳಗಾವಿ: ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿದ್ದೇವೆ. ಇನ್ನು 2-3 ತಿಂಗಳಲ್ಲಿ ಶೈಕ್ಷಣಿಕ ವರ್ಷ ಮುಗಿದು ಹೋಗುತ್ತದೆ. ಈಗಲೂ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಸಾಕ್ಸ್ ಕೊಟ್ಟಿಲ್ಲ ಏಕೆ ಎಂದು ಹುಬ್ಬಳ್ಳಿ- ಧಾರವಾಡ ಕೇಂದ್ರೀಯ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಶಾಲಾ ಮಕ್ಕಳಿಗೆ ಶೂ ಸಾಕ್ಸ್ ವಿತರಿಸಲು ಸಮಸ್ಯೆ ಏನಿದೆ? ಹಣದ ಕೊರತೆ ಇದೆಯೇ ಎಂದು ಪ್ರಶ್ನಿಸಿದರು. ಜತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ ಏಕೆ ಎಂದು ಕುಟುಕಿದರು.
ಬಳಿಕ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, ಯಾವುದೇ ರೀತಿಯಲ್ಲೂ ಹಣದ ಕೊರತೆ ಇಲ್ಲ. ಶೂ ಸಾಕ್ಸ್ ಖರೀದಿಗೆ ಶಾಲಾಭಿವೃದ್ಧಿ ಸಮಿತಿಯವರಿಗೆ ಹಣ ನೀಡುತ್ತೇವೆ. ಒಂದು ವೇಳೆ ಶಾಲಾಭಿವೃದ್ಧಿ ಸಮಿತಿಯವರು ಬೇಡಿಕೆ ಇಟ್ಟರೂ ಅಧಿಕಾರಿಗಳು ಹಣ ಬಿಡುಗಡೆ ಮಾಡದಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದರು.
ಇನ್ನು ಹೊಸ ಕೊಠಡಿ ನಿರ್ಮಾಣಕ್ಕೆ 360 ಕೋಟಿ ರೂ., ಕೊಠಡಿ ರಿಪೇರಿಗೆ 100 ಕೋಟಿ ರೂ., ಶೌಚಾಲಯ ರಿಪೇರಿಗೆ 90 ಕೋಟಿ ರೂ., ಪದವಿಪೂರ್ವ ಕಾಲೇಜು ಮೂಲಸೌಕರ್ಯಕ್ಕೆ 97 ಕೋಟಿ ರೂ. ಇಂದು ನಾಳೆಯೊಳಗೆ ಬಿಡುಗಡೆಯಾಗುತ್ತದೆ ಎಂದು ವಿವರಿಸಿದರು.