ರಮೇಶ ಕತ್ತಿ 
ಬೆಳಗಾವಿ

ಅಭಿವೃದ್ಧಿಯೋ, ಇಬ್ಭಾಗವೋ ಸರ್ಕಾರ ನಿರ್ಧರಿಸಲಿ!

ಚಿಕ್ಕೋಡಿ: ಕೇವಲ ಅಧಿಕಾರಕ್ಕಾಗಿ ಸಭೆ ಸೇರುತ್ತಿರುವ ಜನಪ್ರತಿನಿಧಿಗಳು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಧ್ವನಿ ಎತ್ತದೆ ಇರುವುದು ದುರಂತ. ಇನ್ನು ಮುಂದೆ ಉತ್ತರ ಕರ್ನಾಟಕ ಅಭಿವೃದ್ಧಿಯೋ ಅಥವಾ ಇಬ್ಭಾಗವೋ ಎಂಬುದನ್ನು ಸರ್ಕಾರವೇ ನಿರ್ಧರಿಸಲಿ ಎಂದು ಮಾಜಿ ಸಂಸದ ರಮೇಶ ಕತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯ ಸ್ವಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕದ ಕಡೆಗಣನೆ ಹಾಗೂ ಪ್ರಾದೇಶಿಕ ಅಸಮಾನತೆ ವಿರುದ್ಧದ ಕೂಗು ಬಲಗೊಳ್ಳುವವರೆಗೂ ಸರ್ಕಾರಗಳ ಮೊಂಡುತನ ಮುಂದುವರಿಯುತ್ತಲೇ ಇರುತ್ತದೆ. ಹೀಗಾಗಿ, ಮುಂಬರುವ ಅಧಿವೇಶನದ ಪೂರ್ವದಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಮಠಾಧೀಶರು, ಕನ್ನಡ ಹಾಗೂ ರೈತಪರ ಹೋರಾಟಗಾರರು, ಜನಪ್ರತಿನಿಧಿಗಳು, ಮಾಜಿ ಸಚಿವ, ಶಾಸಕ, ಸಂಸದರು ಪಕ್ಷಾತೀತವಾಗಿ ಸಭೆ ಸೇರುವ ಮೂಲಕ ಭವಿಷ್ಯದ ಪೀಳಿಗೆಗೆ ಉತ್ತಮ ಬದುಕು ಕಟ್ಟಿಕೊಡುವ ಸಂಕಲ್ಪ ಮಾಡಬೇಕಿದೆ. ಶಾಸಕ ರಾಜು ಕಾಗೆ ಅವರು ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾಗಿ ಪ್ರಸ್ತಾಪಿಸಿರುವ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಹೇಳಿಕೆಯನ್ನು ನಾನೂ ಸೇರಿದಂತೆ ಈ ಭಾಗದ ಅಭಿವೃದ್ಧಿ ಬಯಸುವ ಎಲ್ಲರೂ ಬೆಂಬಲಿಸಲಿದ್ದೇವೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕರ್ನಾಟಕ ಇಬ್ಭಾಗದ ಅವಶ್ಯಕತೆ ಇಲ್ಲ ಎಂದಿದ್ದಾರೆ. ನಮಗೂ ಇಬ್ಭಾಗ ಬೇಕಿಲ್ಲ. ಆದರೆ, ಅಭಿವೃದ್ಧಿ ಖಚಿತವಾಗಿ ಬೇಕು ಎಂದರು. ನಾನು ಅಧಿಕಾರ ಅಥವಾ ಪ್ರಚಾರದ ಆಸೆಗಾಗಿ ಹೋರಾಡುತ್ತಿಲ್ಲ. ನಮ್ಮ ಕುಟುಂಬಕ್ಕೆ ಈ ಭಾಗದ ಜನ ಸಾಕಷ್ಟು ಅಧಿಕಾರ ನೀಡಿ ಬೆಳೆಸಿದ್ದಾರೆ.
ಉತ್ತರ ಕರ್ನಾಟಕದ ಹೋರಾಟದಲ್ಲಿ ಯಾವುದೇ ಸ್ಥಾನಮಾನ, ಫಲಾಪೇಕ್ಷೆ ಬಯಸದೆ ಈ ಭಾಗದ ಸಮಗ್ರ ಅಭಿವೃದ್ಧಿ ವಿಚಾರವಾಗಿ ಹೋರಾಡಲು ಬಯಸಿದ್ದ ಅಣ್ಣ, ಮಾಜಿ ಸಚಿವ ಉಮೇಶ ಕತ್ತಿ ಕನಸು ನನಸಾಗುವ ಸಂಕಲ್ಪ ಮಾಡಿದ್ದೇನೆ ಎಂದರು.
"

ಈ ಬಾರಿ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ನಿರ್ಣಯ ಕೈಗೊಳ್ಳಬೇಕು. ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಯಾಗಿದ್ದು, ಆಡಳಿತಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಚಿಕ್ಕೋಡಿ, ಅಥಣಿ, ಬೈಲಹೊಂಗಲ, ಗೋಕಾಕ ಜಿಲ್ಲೆಗಳ ರಚನೆ ಕುರಿತು ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕು.