ಬೆಳಗಾವಿ ಶಿವಬಸವ ನಗರದ ದಿ.ಇನ್‌ಸ್ಟ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಿ.ಬಿ.ಹಿರೇಮಠ ಮಾತನಾಡಿದರು. ಎಸ್.ವೈ.ಕುಂದರಗಿ, ಡಾ.ವೆಂಕಟೇಶ, ವಿಲಾಸ ಬಾದಾಮಿ, ಎಸ್.ಎಂ.ಮೇಟಿ ಇತರರಿದ್ದರು. 
ಬೆಳಗಾವಿ

ಜಲಸಂಪನ್ಮೂಲ ವಿಚಾರಸಂಕಿರಣ ನಾಳೆಯಿಂದ

ಪ್ರಮುಖ ಮುಖ್ಯಾಂಶಗಳು

  • ಸಿ.ಬಿ.ಹಿರೇಮಠ ಮಾಹಿತಿ
  • ಜಲಸಂಪನ್ಮೂಲ ನಿರ್ವಹಣೆ, ಸುಸ್ಥಿರತೆ ಚರ್ಚೆ
ಬೆಳಗಾವಿ: ಇಲ್ಲಿನ ಶಿವಬಸವ ನಗರದ ದಿ.ಇನ್‌ಸ್ಟ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಫೆ.6 ಮತ್ತು 7ರಂದು ಎರಡು ದಿನ ಜಲಸಂಪನ್ಮೂಲ ಮತ್ತು ಅವುಗಳ ನಿರ್ವಹಣೆ, ಸುಸ್ಥಿರತೆ ಕುರಿತ ರಾಷ್ಟ್ರಮಟ್ಟದ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಆಯೋಜನೆ ಸಮಿತಿ ಅಧ್ಯಕ್ಷ ಸಿ.ಬಿ.ಹಿರೇಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಮುಂಗಾರು, ಹಿಂಗಾರು ಬೆಳೆಗಳಿಗೆ ಅಗತ್ಯವಿರುವ ಸಮಯಾಧಾರಿತ ನೀರಿನ ಅಗತ್ಯತೆಗಳ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಅನಿಶ್ಚಿತತೆಯಿಂದ ಜಲಸಂಪನ್ಮೂಲ ಯೋಜನೆಗಳ ನಿರ್ವಹಣೆಯಲ್ಲಿ ವ್ಯತ್ಯಾಸ ಆಗಬಹುದು. ಹೀಗಾಗಿ, ನೀರಾವರಿ ಯೋಜನೆ ಯಾವ ರೀತಿ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ, ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ ಎಂದರು.
ಎರಡು ದಿನಗಳ ವಿಚಾರಸಂಕಿರಣದಲ್ಲಿ ಜಲಸಂಪನ್ಮೂಲ ಇಲಾಖೆ ಮಾಜಿ ಕಾರ್ಯದರ್ಶಿ ಇಜಾಜ್ ಹುಸೇನ್, ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜೈಪ್ರಕಾಶ, ಕರ್ನಾಟಕ ನೀರಾವರಿ ನಿಗಮದ ಎಂಡಿ ರಾಜೇಶ ಅಮ್ಮಿನಭಾವಿ, ನೀರಾವರಿ ತಜ್ಞ ಕೆ.ಬಿ.ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯ ಕುರಿತು ವಿಚಾರ ಮಂಡಿಸಲಿದ್ದಾರೆ. ನೀರಾವರಿ ಇಲಾಖೆಯ 100 ಇಂಜಿನಿಯರ್‌ಗಳು ಭಾಗವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಎಸ್.ವೈ.ಕುಂದರಗಿ, ಡಾ.ವೆಂಕಟೇಶ, ವಿಲಾಸ ಬಾದಾಮಿ, ಎಸ್.ಎಂ. ಮೇಟಿ ಇತರರಿದ್ದರು.