ಚಿಕ್ಕೋಡಿ ನಗರದ ಹೊರ ವಲಯದಲ್ಲಿರುವ ಕೆರೆ ನೀರಿಲ್ಲದೆ ಬತ್ತಿರುವುದು. 
ಬೆಳಗಾವಿ

ಕೆರೆ ಕಟ್ಟೆಗಳಿಗೆ ತಟ್ಟಿದ ನೀರಿನ ‘ಬರ’!

ಮಂಜುನಾಥ ಕೋಳಿಗುಡ್ಡ
ಬೆಳಗಾವಿ :ಗ್ರಾಮೀಣ ಪ್ರದೇಶಗಳಲ್ಲಿ ಜನ, ಜಾನುವಾರಗಳ ಕುಡಿಯುವ ನೀರಿನ ಅಕ್ಷಯ ಪಾತ್ರೆಯಾಗಿರುವ ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದ್ದು, ಜನಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಆತಂಕ ಎದುರಾಗಿದೆ!
ಹೌದು.ಕಳೆದ ನಾಲ್ಕೈದು ವರ್ಷಗಳಲ್ಲಿ ಕಾಣದಷ್ಟು ಗಂಭೀರ ಜಲಬಿಕ್ಕಟ್ಟು ಈ ಬಾರಿ ತಲೆದೋರಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು,ಮುಂಗಾರು ವೈಫಲ್ಯದಿಂದಾಗಿ ಜಿಲ್ಲೆಯಲ್ಲಿನ ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ 796 ಕೆರೆ-ಕಟ್ಟೆಗಳ ಪೈಕಿ 180 ಕ್ಕೂ ಅಧಿಕ ಕೆರೆಗಳು ನೀರಿಲ್ಲದೆ ಬತ್ತಿವೆ. ಇನ್ನೂಳಿದ ಕೆರೆಗಳಲ್ಲಿ ಶೇ.30ರಷ್ಟು ನೀರು ಮಾತ್ರ ಲಭ್ಯವಿದೆ.
ಕಳೆದ ಮುಂಗಾರು, ಹಿಂಗಾರಿನಲ್ಲಿ ಸಮರ್ಪಕ ಮಳೆಯ ಹಿನ್ನೆಲೆಯಲ್ಲಿ ಶೇ.85ರಷ್ಟು ಕೆರೆ-ಕಟ್ಟೆಗಳು ಭರ್ತಿಯಾಗಿದ್ದವು. ಶೇ.15ರಷ್ಟು ಕೆರೆಗಳಿಗೆ ನೀರಿ ಮೂಲಗಳು ಬಂದ್ ಆಗಿದ್ದರಿಂದ ಶೇ.40ರಷ್ಟು ಭರ್ತಿಯಾಗಿದ್ದವು. ಇದರಿಂದಾಗಿ ಅಂತರ್ಜಲ ಮಟ್ಟವೂ ಸಮೃದ್ಧವಾಗಿತ್ತು. ಆದರೆ ಪ್ರಸಕ್ತ ವರ್ಷ ಚಿತ್ರಣ ಸಂಪೂರ್ಣ ವ್ಯತಿರಿಕ್ತವಾಗಿದೆ. ಕೆರೆಗಳಿಗೆ ಏತ ನೀರಾವರಿ ಯೋಜನೆಯ ಸೌಲಭ್ಯವಿದ್ದರು ನದಿಗಳಲ್ಲಿ ನೀರಿಲ್ಲದಿರುವ ಕಾರಣ ಕೆರೆಗಳ ತುಂಬಿಸುವ ಕಾರ್ಯ ಕೂಡ ಸ್ಥಗೀತಗೊಂಡಿದ್ದರಿಂದ ಸಮಸ್ಯೆ ತೀವ್ರರೂಪ ಪಡೆದುಕೊಳ್ಳಲು ಕಾರಣ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಕೆರೆ-ಕಟ್ಟೆಗಳಲ್ಲಿ ನೀರಿನ ಕೊರತೆ ಕೇವಲ ಕೃಷಿ ಹಾಗೂ ಜಾನುವಾರುಗಳಿಗೆ ಮಾತ್ರ ಸೀಮಿತವಾಗದೆ, ವನ್ಯಜೀವಿ ಮತ್ತು ಇತರ ಜೀವಸಂಕುಲದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.ಬಿಸಲಿನ ತಾಪಮಾನ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ರೈತರು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ನೀರು ಒದಗಿಸುವುದು ಅತ್ಯಂತ ಸವಾಲಿನ ಸಂಗತಿಯಾಗಲಿದೆ.
ಕಾಲವೆಗಳ ನಿರ್ಮಾಣ ಮೊಟಕು: ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ, ಕಂದಾಯ ಭೂಮಿ ಸಂರಕ್ಷಣೆ, ಅಂತರ್ಜಲ ಮಟ್ಟ ವೃದ್ಧಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ 214 ಹೊಸ ಕೆರೆಗಳ ನಿರ್ಮಾಣ, 489 ಹಳೆ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಮಳೆ ನೀರು ಹರಿದು ಬರುವ ಮಾರ್ಗಗಳು ಮುಚ್ಚಿರುವುದರಿಂದ 125ಕ್ಕೂ ಅಧಿಕ ಹಳೆ ಕೆರೆಗಳ ನೀರಿಲ್ಲದೆ ಬತ್ತಿವೆ. ಕೆಲ ಕೆರೆಗಳಿಗೆ ನೀರಾವರಿ ಕಾಲುವೆಗಳ ಸಂಪರ್ಕ ಕಲ್ಪಿಸಿದರು ನೀರು ಬರುತ್ತಿಲ್ಲ. ಮತ್ತೊಂದೆಡೆ ಪಂಚಾಯತ್ ರಾಜ್ 105 ಮತ್ತು ಸಣ್ಣ ನೀರಾವರಿ 45 ಕೆರೆಗಳ ಸೇರಿದಂತೆ 150 ಕೆರೆಗಳ ಹೂಳೆತ್ತುವ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಇಂಜಿನಿಯರ್‌ಗಳು ತಿಳಿಸಿದ್ದಾರೆ.
...............................
ಬಾಕ್ಸ್
ವಿಭಾಗ ಒಟ್ಟು ಖಾಲಿ ನೀರಿನ ಲಭ್ಯತೆ (ಶೇ.30ರಷ್ಟು)
ಸಣ್ಣ ನೀರಾವರಿ 298 115 183
ಆರ್‌ಡಿಪಿಆರ್ 498 65 433
ಒಟ್ಟು 796 180 616
............................
ಕೋಟ್ಸ್
ಮಳೆಯ ಅಭಾವದಿಂದಾಗಿ ನೀರಿಲ್ಲದೆ ಬತ್ತಿರುವ ಕೆರೆಗಳನ್ನು ಕಾಲುವೆಗಳು, ಏತ ನೀರಾವರಿಯೋಜನೆ ಪೈಪಲೈನ್ ಮೂಲಕ ತುಂಬಿಸಲು ಕ್ರಮ ವಹಿಸಲಾಗಿದೆ. ಕೆಲ ಭಾಗದಲ್ಲಿರುವ ಕೆರೆಗಳನ್ನು ತುಂಬಿಸಲು ಪರ್ಯಾಯ ಮಾರ್ಗಗಳು ಇಲ್ಲ.
-ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
............
ಕೋಟ್ಸ್
ಗ್ರಾಮೀಣ ಭಾಗದಲ್ಲಿರುವ ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆ ಜಾನುವಾರಗಳಿಗೆ ನೀರಿನ ಸಮಸ್ಯೆ ಆಗದಂತೆ ಪರ್ಯಾಯ ಕ್ರಮ ವಹಿಸಲು ತಾಪಂ, ಗ್ರಾಪಂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅವಶ್ಯಬಿದ್ದರೆ ಕೊಳವೆ ಬಾವಿ ಕೊರೆಯಿಸಿ ನೀರು ಒದಗಿಸಲಾಗುವುದು.
- ರಾಹುಲ ಶಿಂಧೆ, ಜಿಪಂ ಸಿಇಒ
............