ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಸಂಪಾದನಾ ಸ್ವಾಮೀಜಿ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಚಂದ್ರಶೇಖರ ಅರಬಾವಿ ಇತರರಿದ್ದರು.
ಚಿಕ್ಕೋಡಿ: ಡಿಸೆಂಬರ್ ತಿಂಗಳಾಂತ್ಯದ ಒಳಗಾಗಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಘೋಷಣೆ ಆಗದಿದ್ದರೆ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಸ್ವಾಮೀಜಿಗಳು, ಸಂಘಟನೆಗಳು ಸೇರಿ ಕಿತ್ತೂರು ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ತೀವ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಸಂಪಾದನಾ ಸ್ವಾಮೀಜಿ ಎಚ್ಚರಿಸಿದರು.
ಪಟ್ಟಣದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಘೋಷಣೆಗಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲೆಗಾಗಿ ಮೂರು ದಶಕಗಳಿಂದ ಮಾಡುತ್ತಿರುವ ಹೋರಾಟಕ್ಕೆ ನಿರಾಸೆ ಉಂಟಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ವಕೀಲ ಪ್ರಶಾಂತ ಹುಕ್ಕೇರಿ ಮಾತನಾಡಿ, ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಏಕೆ ಪ್ರಯತ್ನಿಸುತ್ತಿಲ್ಲ. ಜಿಲ್ಲೆ ರಚಿಸುತ್ತೇವೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಹೋರಾಟಕ್ಕೆ, ರೈತಪರ ಸಂಘಟನೆ, ನಿವೃತ್ತ ನೌಕರರ ಸಂಘಟನೆ, ರೈತಮೋರ್ಚಾ ಮಹಿಳಾ ಸಂಘಟನೆ ಹಾಗೂ ವಕೀಲರು ಬೆಂಬಲ ವ್ಯಕ್ತಪಡಿಸಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಅರಭಾವಿ, ಮಹಾದೇವ ಬರಗಾಲೆ, ಐ.ಜಿ.ಹಳೊಳಿ, ಡಿ.ಎ.ಮಾನೆ, ಜೆ.ಆರ್.ದಿನಕರ, ಸಂಗೀತಾ ಚಾವರೆ, ಸುರೇಖಾ ರಾಮನಕಟ್ಟಿ, ಸಿದ್ರಾಮ ಕರಗಾಂವಿ, ಎಂ.ಎಂ.ಪಾಟೀಲ, ಸುಧಾಕರ ಹೊರಾಟೆ, ಎ.ಐ.ನದಾಫ, ಬಿ.ಎಸ್.ಪಾಟೀಲ, ರೈತಸಂಘದ ಅಧ್ಯಕ್ಷ ಗುರುನಾಥ ಹೆಗಡೆ, ಮಹಿಳಾ ಅಧ್ಯಕ್ಷೆ ಸರೋಜನಿ ಅರಗೆ, ಮಾಯವ್ವ ಲೋಕರೆ, ರೇಷ್ಮಾ ಚಿನಗುಂಡೆ, ಶ್ರವಣಕುಮಾರ ದೇವಮಾನೆ, ದಶರಥ ಮಾಂಗ, ಕೆಂಚಪ್ಪ ಕಾಮಗೌಡ ಇತರರಿದ್ದರು.