ಇ-ವಿದ್ಯಾರ್ಥಿ ಮಿತ್ರ ಪೋರ್ಟಲ್ ಆರಂಭ
ಬೆಳಗಾವಿ:ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ತನ್ನ ವ್ಯಾಪ್ತಿಯ 220 ಕಾಲೇಜಿನಲ್ಲಿ ಓದುತ್ತಿರುವ 4 ಲಕ್ಷ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ವಿಟಿಯು ಇ-ವಿದ್ಯಾರ್ಥಿ ಮಿತ್ರ ಪೋರ್ಟಲ್ ಆರಂಭಿಸಿದೆ.
ವಿದ್ಯಾರ್ಥಿಗಳು ಅಂಕಪಟ್ಟಿ ವಿಳಂಬ, ಪರೀಕ್ಷಾ ಗೊಂದಲ, ಆಡಳಿತ ವಿಭಾಗ ಕುಂದು ಕೊರತೆ ಸೇರಿದಂತೆ ಯಾವುದೇ ಸಮಸ್ಯೆಗಳು ಇದ್ದಲ್ಲಿ, ನೇರವಾಗಿ ಇ-ಮೇಲ್ ಕಳುಹಿಸಿ ಇದಕ್ಕೆ ಶೀಘ್ರ ಪರಿಹಾರ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ನೀಡಲಾಗಿರುವ ಯುಎಸ್‌ಎನ್ ನಂಬರ್ ಬಳಕೆ ಮಾಡಿಕೊಂಡು ಲಾಗಿನ್ ಆಗಿ, ದೂರು ಸಲ್ಲಿಸಬಹುದು. ದೂರುಗಳು ಗೌಪ್ಯವಾಗಿರಲಿದೆ. ನೇರವಾಗಿ ನಾನೇ ದೂರುಗಳನ್ನು ಪರಿಶೀಲಿಸುತ್ತೇನೆ. ಇದಕ್ಕೆ ಶೀಘ್ರ ಪರಿಹಾರ ಕಲ್ಪಿಸಿಕೊಡುತ್ತೇವೆ.
ವಿಟಿಯು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಲ್ಲಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ದೂರು ಸಲ್ಲಿಸಬಹುದು. ಸೂಕ್ಷ್ಮ ವಿಷಯಗಳಾಗಿದ್ದರೆ ವಿದ್ಯಾರ್ಥಿ ಹೆಸರು ಬಹಿರಂಗ ಪಡಿಸುವುದಿಲ್ಲ. ಸಮಸ್ಯೆಗಳಿಗೆ ತಕ್ಷಣ ಪರಿಹರಿಸಲು ಕಲಿಕೆಗೆ ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ. ಪೋಷಕರು ಕೂಡ ಸಮಸ್ಯೆ ಹೇಳಬಹುದು. ಇದೊಂದು ವಿದ್ಯಾರ್ಥಿ ಸ್ನೇಹಿ ಉಪಕ್ರಮವಾಗಿದೆ ಎಂದು ಕುಲಪತಿ ಎಸ್.ವಿದ್ಯಾಶಂಕರ್ ಮಾಹಿತಿ ನೀಡಿದರು.