ಸುದ್ದಿಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ಪ್ರವೀಣ ಜೈನ ಮಾತನಾಡಿದರು. ಸದಾಶಿವ ಮಕ್ಕೋಜಿ, ಭಾಗ್ಯಶ್ರೀ ಹುಗ್ಗಿ ಇದ್ದರು.
- ಉಪವಿಭಾಗಾಧಿಕಾರಿ ಪ್ರವೀಣ ಜೈನ ಮಾಹಿತಿ
- ಬೈಲಹೊಂಗಲ ಕ್ಷೇತ್ರದಲ್ಲಿ ಒಟ್ಟು 1,96,071ವೋಟರ್ಸ್
ಬೈಲಹೊಂಗಲ: ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಿ ಸಾಗುತ್ತಿದ್ದು, ಕ್ಷೇತ್ರದಲ್ಲಿನ ಒಟ್ಟು 1,96,071 ಮತದಾರರ ಪೈಕಿ ಶೇ.96.96 ರಷ್ಟು ಮತದಾರರ ಪಟ್ಟಿ ಜೋಡಣೆ ಕಾರ್ಯ ಪೂರ್ಣಗೊಂಡಿದೆ ಎಂದು ಉಪವಿಭಾಗಾಧಿಕಾರಿ ಪ್ರವೀಣ ಜೈನ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 97,251 ಪುರುಷ, 98,824 ಮಹಿಳಾ ಹಾಗೂ 7 ತೃತೀಯ ಲಿಂಗಿಗಳು ಸೇರಿ ಒಟ್ಟು 1,96,071 ಮತದಾರರಿದ್ದಾರೆ.
ಮನೆ ಮನೆಗೆ ಭೇಟಿ ನೀಡುತ್ತಿರುವ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಕುಟುಂಬದ ವಿವರ, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳ ಆಧಾರದ ಮೇಲೆ ಮತದಾರರ ಮಾಹಿತಿ ಪರಿಶೀಲಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಲ್ಲಿನ ಮಾಹಿತಿ ನವೀಕರಿಸಿ, ಮುಂದಿನ ಪರಿಷ್ಕರಣೆ ಕಾರ್ಯಕ್ಕೆ ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ವಿಶೇಷ ಪರಿಷ್ಕರಣೆ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಬಿಎಲ್‌ಒಗಳು, ಮೇಲ್ವಿಚಾರಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮನೆ ಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವ ಕಾರ್ಯ ಜುಲೈ ಅಂತ್ಯದವರೆಗೆ ಮುಂದುವರಿಯಲಿದೆ. ಆಗಸ್ಟ್ 5ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ತಮ್ಮ ಮತದಾರರ ವಿವರ ಪರಿಶೀಲಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆ ಸಲ್ಲಿಸುವ ಮೂಲಕ ಮತದಾನದ ಹಕ್ಕನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಸದಾಶಿವ ಮಕ್ಕೋಜಿ, ನಗರಸಭೆ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ಇದ್ದರು.
ಅ.7ರಂದು ಅಂತಿಮ ಲಿಸ್ಟ್ ಬಿಡುಗಡೆ
ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಸಾರ್ವಜನಿಕರಿಗೆ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಆಕ್ಷೇಪಣೆ ಸೇರಿದಂತೆ ವಿವಿಧ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಸಲ್ಲಿಕೆಯಾಗುವ ಅರ್ಜಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗುವುದು. ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಅಕ್ಟೋಬರ್ 7ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಪ್ರವೀಣ ಜೈನ ತಿಳಿಸಿದರು.