ಬೆಳಗಾವಿಯ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ಯುವದಿನದಲ್ಲಿ ಡಾ.ಭಾವನಾ ದೇಶಪಾಂಡೆ, ಡಾ.ನಿರ್ಮಲಾ ಬಟ್ಟಲ, ಡಾ.ಗೀತಾ ದಯಣ್ಣವರ ಇದ್ದಾರೆ. 
ಬೆಳಗಾವಿ

ವಿವೇಕಾನಂದರ ಜೀವನ ಆದರ್ಶವಾಗಬೇಕು

ಬೆಳಗಾವಿ: ಇಂದು ಸೃಜನಶೀಲತೆ, ಕ್ರಿಯಾಶೀಲತೆ ಕಡಿಮೆಯಾಗುತ್ತಿದ್ದು, ಸ್ವಾಮಿ ವಿವೇಕಾನಂದರ ಜೀವನ ಯುವ ಪೀಳಿಗೆಗೆ ಆದರ್ಶವಾಗಬೇಕು. ಭಾರತದ ಸಮಗ್ರ ವಿಕಾಸಕ್ಕೆ ವಿವೇಕಾನಂದರ ಚಿಂತನೆಗಳು ಅವಶ್ಯವಾಗಿವೆ ಎಂದು ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ ಬೆಳಗಾವಿ ಘಟಕದ ಆರ್ಥಿಕ ಸಲಹೆಗಾರ್ತಿ ಡಾ.ಭಾವನಾ ದೇಶಪಾಂಡೆ ಹೇಳಿದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಐಕ್ಯೂಎಸಿ ಘಟಕ, ಕೇಂದ್ರ ಸರ್ಕಾರದ ಮೇರಾ ಭಾರತ ಕೇಂದ್ರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನ ಪ್ರಯುಕ್ತ ಏರ್ಪಡಿಸಿದ್ದ ದ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಚಾರ್ಯ ಡಾ.ನಿರ್ಮಲಾ ಬಟ್ಟಲ ಮಾತನಾಡಿ, ವಿವೇಕಾನಂದರು ಕುಶಾಗ್ರಮತಿ, ಬುದ್ಧಿವಂತರಾಗಿದ್ದರು. ಆಗಿನ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕದ ಮೂಲಕ ಪರಿಹಾರ ನೀಡಿದರು. ಅವರು ಬೆಳಗಾವಿಗೂ ಬಂದಿದ್ದರು. ಇದರಿಂದ ಸ್ಫೂರ್ತಿ ಪಡೆದು ಅವರ ಜೀವನ, ಶಿಸ್ತು, ಚಿಂತನೆ , ತತ್ವ ಹಾಗೂ ವಿಚಾರಧಾರೆಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.
ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ‘ಸ್ಥಿರ ಯುವ ನಾಯಕತ್ವಕ್ಕಾಗಿ ಸ್ವಾಮಿ ವಿವೇಕಾನಂದರ ದೃಷ್ಟಿಕೋನ’ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವೃತಿಕಾ ಜಾಲಿಹಾಳ ಪ್ರಥಮ, ಪ್ರಜ್ವಲ ವಣ್ಣೂರ ದ್ವಿತೀಯ, ಆಶಾ ಮುನೆನ್ನಿ ತೃತೀಯ ಹಾಗೂ ಪ್ರೇಮ ಕುಮಾರ, ವೀಣಾ ಹಿರೇಮಠ, ಕವಿತಾ ಕಡಬಿ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಡಾ.ಗೀತಾ ದಯಣ್ಣವರ, ಪ್ರೇಮಕುಮಾರಿ ಇತರರಿದ್ದರು. ಅನ್ನಪೂರ್ಣ ಹಣಬರ ಪ್ರಾರ್ಥಿಸಿದರು, ಪ್ರೊ.ಮಂಜುನಾಥ ಕಲಾಲ ಸ್ವಾಗತಿಸಿದರು, ನಿಖಿತಾ ಲಂಗೋಟಿ ನಿರೂಪಿಸಿದರು. ಅಂಜನಾ ಬುಡಕಿ ವಂದಿಸಿದರು.