ಬೆಳಗಾವಿ ತಾಲೂಕಿನ ಶಿಂದೊಳ್ಳಿಯ ದೇವೇಂದ್ರ ಜಿನಗೌಡ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಯುವ ಸ್ಫೂರ್ತಿ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ಡಾ.ಗೋಪಾಲ ದೇವೇಂದ್ರ ಜಿನಗೌಡ, ಕುಂತುಸಾಗರ ಹರದಿ, ವಿಜಯಲಕ್ಷ್ಮೀ ಪಾಟೀಲ, ಭಾರತಿ ರಾಂಗಣೇಕರ ಇದ್ದಾರೆ.
ಬೆಳಗಾವಿ: ಜೀವನದಲ್ಲಿ ಯಾವುದೇ ಕೆಲಸ ಮಾಡಬೇಕಾದಲ್ಲಿ ದೃಢ ಸಂಕಲ್ಪ ಬಹಳ ಮುಖ್ಯ. ಮನಸ್ಸಿನಲ್ಲಿ ಸದಾಚಾರಗಳಿದ್ದರೆ ಯಶಸ್ಸು ನಿಶ್ಚಿತ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ತಾಲೂಕಿನ ಶಿಂದೊಳ್ಳಿಯ ದೇವೇಂದ್ರ ಜಿನಗೌಡ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಸ್ವಾಮಿ ವಿವೇಕಾನಂದ ಯುವ ಸ್ಫೂರ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಬೋಧನೆ ಗಳನ್ನು ವಿದ್ಯಾರ್ಥಿಗಳು ಓದಿ, ಅರಿತು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಇಂದಿನ ಯುವ ಭಾರತಕ್ಕೆ ಪ್ರಸ್ತುತವಾಗಿವೆ. ಯುವ ಸಮೂಹ ದೇಹದ ಸದೃಢತೆ, ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಂಡು ಸಿಂಹದಂತೆ ಕೆಲಸ ಮಾಡಬೇಕು. ದೇಶಾಭಿಮಾನ, ರಾಷ್ಟ್ರಭಕ್ತಿಯ ಕಿಚ್ಚು ಸದಾ ವಿದ್ಯಾರ್ಥಿಗಳಲ್ಲಿರಬೇಕು ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಶಾಲೆ ಅಧ್ಯಕ್ಷ ಡಾ.ಗೋಪಾಲ ದೇವೇಂದ್ರ ಜಿನಗೌಡ ಮಾತನಾಡಿ, ಸ್ವಾಮಿ ವಿವೇಕಾನಂದ, ಬುದ್ಧ, ಮಹಾವೀರ, ಬಸವೇಶ್ವರ, ಅಬ್ದುಲ್ ಕಲಾಂರಂತಹ ಮಹಾತ್ಮರು ಆಗಿಹೋದ ದೇಶದಲ್ಲಿ ಜನಿಸಿರುವ ನಾವೇ ಭಾಗ್ಯವಂತರು ಎಂದರು.
ಕಾರ್ಯದರ್ಶಿ ಕುಂತುಸಾಗರ ಹರದಿ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಪಾಟೀಲ, ಪ್ರಾಂಶುಪಾಲ ಭಾರತಿ ರಾಂಗಣೇಕರ ಇತರರಿದ್ದರು.