ಬೆಳಗಾವಿಯ ರಾಮಕೃಷ್ಣ ಮಷನ್ ಆಶ್ರಮದಲ್ಲಿ ಸೋಮವಾ ಜರುಗಿದ ಯುವ ದಿನದಲ್ಲಿ ಸ್ವಾಮಿ ಮೋಕ್ಷಾತ್ಮಾನಂದ ದೀಪ ಬೆಳಗಿದರು. ಸ್ವಾಮಿ ಆತ್ಮಪ್ರಣಾನಂದ, ಡಾ.ರವೀಂದ್ರ ಗುರುವಣ್ಣವರ, ಮಧುಸೂದನ್ ಇದ್ದಾರೆ.
ಬೆಳಗಾವಿ: ವಿದ್ಯಾರ್ಥಿಗಳು ಬ್ರಹ್ಮಚರ್ಯೆ, ಧ್ಯಾನವನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಸ್ವಾಮಿ ವಿವೇಕಾನಂದರ ಜೀವನದ ತತ್ವಾದರ್ಶಗಳನ್ನು ಪರಿಪಾಲನೆ ಮಾಡಿದಲ್ಲಿ ಭವಿಷ್ಯದ ಗುರಿಯನ್ನು ಸುಲಭವಾಗಿ ಸಾಧಿಸಬಹುದು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಕಿವಿಮಾತು ಹೇಳಿದರು.
ನಗರದ ಕೋಟೆ ಆವರಣದಲ್ಲಿನ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 164ನೇ ಜನ್ಮದಿನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಯುವ ಸಮ್ಮೇಳನದಲ್ಲಿ ‘ಸ್ವಾಮಿ ವಿವೇಕಾನಂದರು : ಒಂದು ಸ್ಫೂರ್ತಿ ಮತ್ತು ಮಾರ್ಗದರ್ಶಕ ಬೆಳಕು’ ವಿಷಯವಾಗಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ. ಈ ಅವಧಿಯಲ್ಲಿ ಸಾಧ್ಯವಾದರೆ ಮೊಬೈಲ್ ತ್ಯಜಿಸಿದರೆ ಉತ್ತಮ. ಇಲ್ಲವೇ ಒಳ್ಳೆ ಕೆಲಸಕ್ಕೆ ಮಾತ್ರ ಬಳಸಬೇಕು. ಮೊಬೈಲ್‌ನಿಂದ ಜೀವನದ ಅಮೂಲ್ಯ ಅವಧಿಯನ್ನು ಹಾಳು ಮಾಡಿಕೊಂಡು ಅದರ ದಾಸರಾಗಬಾರದು. ನಮ್ಮ ನಿಯಂತ್ರಣದಲ್ಲಿ ಮೊಬೈಲ್ ಇರಬೇಕೆ ಹೊರತು, ಅದರ ನಿಯಂತ್ರಣದಲ್ಲಿ ನಾವಿರಬಾರದು ಎಂದರು.
ಹೈದರಾಬಾದ್ ಐಐಟಿ ಮಾಜಿ ಅಧ್ಯಾಪಕ ಡಾ.ರವೀಂದ್ರ ಗುರುವಣ್ಣವರ ‘ನಿಜವಾದ ಕಲಿಕೆ’ ವಿಷಯವಾಗಿ ಮಾತನಾಡಿ, ಅಂಕಕ್ಕಾಗಿ ಓದದೇ ವಿಷಯ ಗ್ರಹಿಸಿಕೊಂಡು ಓದಬೇಕು. ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ ಅದನ್ನು ಸಾಧಿಸುವುದು ಸಹ ಅಷ್ಟೇ ಮುಖ್ಯ ಎಂದರು.
ಧಾರವಾಡ ತಾಲೂಕಿನ ತಡಕೋಡದ ವಂದೇ ಮಾತರಂ ಗುರುಕುಲಂ ಸಂಸ್ಥಾಪಕ ಮಧುಸೂದನ್ ‘ಸ್ವಾಮಿ ವಿವೇಕಾನಂದರ ಭಾರತ ಮತ್ತು ಯುವಕರಿಗೆ ಅವರ ಕರೆ’ ವಿಷಯವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರ ಒಂದೊಂದು ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ಜೀವನ ಸಾರ್ಥಕವಾಗುತ್ತದೆ. ಒಂದು ಸಲ ವಿವೇಕಾನಂದರು ನಮ್ಮ ಜೀವನದೊಳಹೊಕ್ಕರೆ ಸಾಕು. ನಮ್ಮಲ್ಲಿರುವ ಆತ್ಮಶಕ್ತಿ ಸದಾ ಜಾಗೃತವಾಗಿರುತ್ತದೆ ಎಂದು ಹೇಳಿದರು.
ಉಪನ್ಯಾಸಕ ಉದಯ ಪಾಟೀಲ ನಿರೂಪಿಸಿದರು. ಬೆಳಗಾವಿಯ ವಿವಿಧ ಕಾಲೇಜುಗಳ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.