ಬೆಳಗಾವಿಯಲ್ಲಿ ಜರುಗಿದ ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾ ಘಟಕವನ್ನು ವಿಜಯಕುಮಾರ ಪತ್ತಾರ ಉದ್ಘಾಟಿಸಿದರು.  
ಬೆಳಗಾವಿ

ಹಕ್ಕು ಪಡೆಯಲು ವಿಶ್ವಕರ್ಮರು ಸಂಘಟಿತರಾಗಬೇಕು

ಬೆಳಗಾವಿ: ವಿಶ್ವಕರ್ಮ ಸಮುದಾಯವು ಸಮ ಸಮಾಜ ನಿರ್ಮಾಣ ಮತ್ತು ಸಾಮಾಜಿಕ ನ್ಯಾಯದಡಿ ತನ್ನ ಹಕ್ಕುಗಳನ್ನು ಪಡೆಯಬೇಕಾದಲ್ಲಿ ಸಂಘಟನೆ, ಜಾಗೃತಿ ಹಾಗೂ ಅರಿವು ಅತ್ಯಂತ ಅವಶ್ಯಕ. ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವಕರ್ಮರು ನ್ಯಾಯ ಪಡೆದುಕೊಳ್ಳಲು ಹೆಚ್ಚು ಸಂಘಟಿತರಾಗಬೇಕಿದೆ ಎಂದು ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷ ವಿಜಯಕುಮಾರ ಪತ್ತಾರ ಹೇಳಿದರು.
ಇಲ್ಲಿನ ಕಾಳಿ ಅಂಬ್ರಾಯಿಯ ವಿಶ್ವಕರ್ಮ ವಿದ್ಯಾವರ್ಧಕ ಸಂಘದಲ್ಲಿ ಜರುಗಿದ ಒಕ್ಕೂಟದ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಲ್ಲಿ ಮುಂಚೂಣಿಯಲ್ಲಿರುವ ವಿಶ್ವಕರ್ಮ ಸಮಾಜವು ಈ ನಾಡಿಗೆ ಪಂಚ ಕಸಬುಗಳನ್ನು ನೀಡಿದ್ದು, ಕಾಯಕವನ್ನು ಪೂಜೆಯಂತೆ ಕೈಗೊಂಡಿದೆ. ಆದರೆ ಸ್ವಾತಂತ್ರ್ಯ ದೊರೆತು 78 ವರ್ಷಗಳಾದರೂ ಸಾಮಾಜಿಕ ನ್ಯಾಯದಿಂದ ವಂಚಿತವಾಗಿದ್ದು, ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ ಸರಿಯಾದ ಉತ್ತರ ನೀಡಬೇಕಿದೆ ಎಂದರು.
ಒಕ್ಕೂಟದ ಜಿಲ್ಲಾ ಘಟಕಕ್ಕೆ ಅಜಿತ ಪಂಡಿತ ಮತ್ತು ಸಿದ್ದಯ್ಯ ಒಡೆಯರ ಗೌರವಾಧ್ಯಕ್ಷರು, ನಾಗರಾಜ ಪೊದ್ದಾರ ಜಿಲ್ಲಾ ಅಧ್ಯಕ್ಷ, ರಾಘವೇಂದ್ರ ಹಾವನೂರು ಪ್ರಧಾನ ಕಾರ್ಯದರ್ಶಿ, ಸೋಮಶೇಖರ ಸುತಾರ ಖಜಾಂಚಿ, ಜಿಲ್ಲಾ ಸಂಚಾಲಕರಾಗಿ ಅಶೋಕ ಸಾವಗಾಂವ, ಗೋಪಾಲ ಪಂಚಾಳ, ಸುಧಾಕರ ಚೊಳಚಗುಡ್ಡ, ಚಿದಾನಂದ, ನಂದಿಹಳ್ಳಿ ಜಗದೀಶ ಗಣೇಶ ಗುಡಿ, ಗಂಗಾಧರ ಸೋನಾರ ಹಾಗೂ ಮಹಿಳಾ ಘಟಕಕ್ಕೆ ಕಮಲಾ ಕಟ್ಟಿ ಗೌರವಾಧ್ಯಕ್ಷೆ , ಪೂರ್ಣಿಮಾ ಪತ್ತಾರ ಜಿಲ್ಲಾ ಅಧ್ಯಕ್ಷೆ, ಮಂಜುಳಾ ಪಾಲಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಮೋಹನ ನರಗುಂದ, ಚಂದ್ರಶೇಖರ ಪತ್ತಾರ, ನಿರಂಜನ ಆಚಾರ, ಪ್ರಭಾಕರ,ಬಡಿಗೇರ, ಅಶೋಕ ಸುತಾರ ಇತರರಿದ್ದರು.