ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಿ.ವೈ.ವಿಜಯೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದರು. 
ಬೆಳಗಾವಿ

ಬಳ್ಳಾರಿ ಪಾದಯಾತ್ರೆ ವಿಷಯದಲ್ಲಿ ಗೊಂದಲವಿಲ್ಲ

ಡಿ.ವಿ. ಕಮ್ಮಾರ
ಬೆಳಗಾವಿ: ಬಳ್ಳಾರಿ ಪಾದಯಾತ್ರೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಈಗಾಗಲೇ ಕೇಂದ್ರ ವರಿಷ್ಠರ ಗಮನಕ್ಕೆ ತಂದಿದ್ದು, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಳಿಕ ಪಾದಯಾತ್ರೆಗೆ ವರಿಷ್ಠರು ಒಪ್ಪಿಗೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರು-ಮೈಸೂರು ಪಾದಯಾತ್ರೆ ಮಾಡಿದಾಗ ಸಣ್ಣಪುಟ್ಟ ಗೊಂದಲಗಳಾಗಿದ್ದವು. ಆದರೆ ಈಗ ಯಾವುದೇ ಗೊಂದಲವಿಲ್ಲ. ಮುಂದೆಯೂ ಯಾವುದೇ ಗೊಂದಲವಾಗಬಾರದೆಂದು ಬಳ್ಳಾರಿ ಪಾದಯಾತ್ರೆ ಬಗ್ಗೆ ರಾಜ್ಯ ಮುಖಂಡರ ಅಭಿಪ್ರಾಯ ಪಡೆದು, ಈಗಾಗಲೇ ಫೋನ್‌ನಲ್ಲಿ ಕೇಂದ್ರ ವರಿಷ್ಠರಿಗೆ ತಿಳಿಸಿದ್ದೇನೆ. ಜ.20ಕ್ಕೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಇದೆ. ಅದಕ್ಕಾಗಿ ನಾನೂ ದೆಹಲಿಗೆ ಹೊರಟಿದ್ದು, ಆ ಪ್ರಕ್ರಿಯೆ ಮುಗಿದ ತಕ್ಷಣವೇ ಪಾದಯಾತ್ರೆ ಬಗ್ಗೆ ಅಂತಿಮ ನಿರ್ಣಯ ಪ್ರಕಟವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಮನರೇಗಾಗೆ ಸುಧಾರಣೆ ತಂದು ವಿಬಿ ಜಿ ರಾಮ ಜಿ ಮಾಡಿದ್ದಾರೆ. ಅದನ್ನು ಚರ್ಚೆ ಮಾಡುವ ನೆಪದಲ್ಲಿ ವಿಶೇಷ ಅಧಿವೇಶ ಕರೆದಿದ್ದಾರೆ. ಈ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ದ್ವೇಷ ಸಾಧಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದು ಶಾಸನ ಸಭೆ ಪಾವಿತ್ರ್ಯತೆ ಹಾಳು ಮಾಡುವಂತಹ ಕ್ರಮ. ರಾಜ್ಯದ ಯೋಜನೆಗಳ ಬಗ್ಗೆ, ನಾಡಿನ ಕಲ್ಯಾಣದ ಬಗ್ಗೆ ಚರ್ಚೆಯಾಗುವ ಸದನವನ್ನು ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಬಳಸಲು ಹೊರಟಿದ್ದಾರೆ. ಈ ಮೂಲಕ ಸಂವಿಧಾನ ,ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರವನ್ನು ಸಿದ್ದರಾಮಯ್ಯ ನಡಸುತ್ತಿದ್ದಾರೆ.
ನಾಡಿನ ಹಿತ ಮರೆತು ಪದೇ ಪದೇ
ಕೇಂದ್ರ ಸರ್ಕಾರದ ವಿರುದ್ಧ ವಿಷ ಕಾರುತ್ತಿದ್ದಾರೆ. ಎರಡೂವರೆ ವರ್ಷ ಜನರನ್ನು ‌ಎತ್ತಿ ಕಟ್ಟುವುದರಲ್ಲೇ ಕಳೆದಿದ್ದು, ಜನರಿಗಾಗಿ ಏನು ಮಾಡಿದ್ದಾರೆ ಎನ್ನುವುದನ್ನು ಹೇಳಲಿ ಎಂದು ಪ್ರಶ್ನಿಸಿದರು‌.
ಸದ್ಯ ಸಿದ್ದರಾಮಯ್ಯ ಚಾಣಾಕ್ಷ ನಡೆ ಅನುಸರಿಸುತ್ತಿದ್ದಾರೆ.
ಒಂದು ಕಡೆ ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತ ಸಿಎಂ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಡಿಕೆಶಿಗೆ ಕೈ ಕೊಡುವ ತಂತ್ರವಾಗಿ ಈಗ ನರೇಗಾ ಚರ್ಚೆ ಹೆಸರಿನಲ್ಲಿ ಈ ಸದನ ಬಳಸುತ್ತಿದ್ದಾರೆ. ಈ ಚರ್ಚೆ ಬಿಟ್ಟು ಎರಡೂವರೆ ವರ್ಷದ ಅವಧಿಯಲ್ಲಿ ಸರ್ಕಾರ ಏನು ಮಾಡಿದೆ ಎಂಬುದರ ಬಗ್ಗೆ ಚರ್ಚೆ ಮಾಡಿದರೆ‌ ಒಳಿತು ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ರಾಜ್ಯ ರಾಜಕಾರಣ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಕುಮಾರಸ್ವಾಮಿಯವರು
ಸಿಎಂ ಆಗಿ ನಾಡಿಗೆ ಒಳ್ಳೆಯ ಕೆಲಸ ಮಾಡಿದವರು. ಅಂತವರು ರಾಜ್ಯ ರಾಜಕಾರಣಕ್ಕೆ ಬಂದಲ್ಲಿ ತಪ್ಪೇನಿದೆ ಎಂದು ಹೇಳಿದರು.