ವೆಂಕಟೇಶ್ವರ ದೇವಸ್ಥಾನದ ಒಳನೋಟ 
ಬೆಳಗಾವಿ

ವೆಂಕೋಬಾ ರಥೋತ್ಸವಕ್ಕೆ ಕ್ಷಣಗಣನೆ

ಚನ್ನಬಸಪ್ಪ ಬಾಳಪ್ಪ ರೊಟ್ಟಿ
ರಾಮದುರ್ಗ: ಪಟ್ಟಣದ ಮಲಪ್ರಭಾ ನದಿ ತೀರದಲ್ಲಿ ಸ್ಥಾಪನೆಗೊಂಡಿರುವ ವೆಂಕೋಬಾ ದೇವರ ಜಾತ್ರಾ ಮಹೋತ್ಸವ ಯುಗಾದಿ ಪಾಡ್ಯದಂದು ಆರಂಭಗೊಂಡಿದ್ದು, ಮಾ.27ರಂದು ಬೆಳಗ್ಗೆ 9ಕ್ಕೆ ರಥೋತ್ಸವ ಜರುಗಲಿದೆ.
ಪೇಶ್ವೆಗಳ ಆಡಳಿತ ಕಾಲದಲ್ಲಿ ಸ್ಥಾಪನೆಗೊಂಡಿರುವ ಈ ಭಾಗದ ಆರಾಧ್ಯದೈವ ವೆಂಕಟೇಶ್ವರ ದೇವಸ್ಥಾನ ತನ್ನದೇ ಪರಂಪರೆ ಹೊಂದಿದ್ದು, ಗಡಿ ಭಾಗದಲ್ಲಿ ಕನ್ನಡ-ಮರಾಠಿಗರ ಸಾಂಸ್ಕೃತಿಕ ಸಂಗಮದ ಪ್ರತಿಬಿಂಬವಾಗಿ ಗುರುತಿಸಿಕೊಂಡಿದೆ.
ಜಾತ್ರೋತ್ಸವ ಪ್ರಯುಕ್ತ ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ನಗರದ ಹುತಾತ್ಮ ಚೌಕದಲ್ಲಿನ ಸ್ವಾಗತ ಕಮಾನು ತಿರುಪತಿ ತಿಮ್ಮಪ್ಪನ ಕ್ಷೇತ್ರಕ್ಕೆ ಸ್ವಾಗತಿಸುವಂತಿದೆ. ಧ್ವನಿವರ್ಧಕಗಳಲ್ಲಿ ಮೊಳಗುವ ಗೋವಿಂದ ನಾಮಾವಳಿ, ವೆಂಕಟೇಶ್ವರ ನಾಮ ಹೋಲುವ ವಿದ್ಯುತ್ ದೀಪಾಲಂಕಾರ ಜಾತ್ರೆಯ ಕಳೆ ಹೆಚ್ಚಿಸಿದೆ.
ಹಿನ್ನೆಲೆ: ಬ್ರಿಟೀಷ್ ಆಳ್ವಿಕೆ ಕಾಲದಲ್ಲಿ ಮರಾಠಿ ಪೇಶ್ವೆಗಳ ಆಡಳಿತಕ್ಕೆ ರಾಮದುರ್ಗ ಸಂಸ್ಥಾನ ಒಳಪಟ್ಟಿತ್ತು. ನರಗುಂದ ಮತ್ತು ರಾಮದುರ್ಗ ಸಂಸ್ಥಾನಗಳು ಭಾವೆ ಸಹೋದರರ ಆಡಳಿತ ವಿಭಜನೆ ನಂತರ ರಾಮದುರ್ಗದ ಕೊನೆಯ ಅರಸು ರಾಮರಾಯ ವೆಂಕಟರಾಯ ಭಾವೆ ರಾಮದುರ್ಗ ಹಾಗೂ ಮುದಕವಿ ಗ್ರಾಮದಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಿ ಜಾತ್ರೆ ಆರಂಭಿಸಿದ್ದಾರೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ.
ಬೆಳಗಿನ ರಥೋತ್ಸವ: ಸಾಮಾನ್ಯವಾಗಿ ಸಂಜೆ ವೇಳೆ ತೇರು ಎಳೆಯುವ ಸಂಪ್ರದಾಯ ಇದ್ದು, ರಾಮದುರ್ಗದ ವೆಂಕಟೇಶ್ವರ ರಥೋತ್ಸವದಲ್ಲಿ ಬೆಳಗಿನ ಜಾವ 9.30ಕ್ಕೆ ರಥ ಎಳೆಯುವುದು ವಿಶೇಷವಾಗಿದೆ. ರಥವು ದೇವಸ್ಥಾನದಿಂದ ಉತ್ತರಾಭಿಮುಖವಾಗಿ ಹೊರಡುತ್ತದೆ. ಅಲ್ಲಿಂದ ಹನಮಂತ ದೇವಸ್ಥಾನದ ಎದುರುಗಿನ ಇಳಿಜಾರು ಪ್ರದೇಶವನ್ನು ರಥ ತಲುಪುತ್ತದೆ. ಅಲ್ಲಿ ಭೋವಿ ಸಮಾಜದವರು ತೇರನ್ನು ಸನ್ನೆಗೋಲು ಮುಖಾಂತರ ಹಿಮ್ಮುಖವಾಗಿ ತಿರುಗಿಸಿ ಪುನಃ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಲು ಅಣಿಗೊಳಿಸುತ್ತಾರೆ. ಬೇರೆ ಜಾತ್ರೆಗಳಲ್ಲಿ ಉತ್ಸವ ಮೂರ್ತಿಯನ್ನು ಮಾತ್ರ ಸ್ಥಳಾಂತರಿಸಿ, ತೇರು ಎಳೆಯುವ ಪದ್ಧತಿ ಇದೆ. ಆದರೆ, ಈ ಜಾತ್ರೆಯಲ್ಲಿ ರಥವನ್ನೇ ತಿರುಗಿಸುವ ವಿಶಿಷ್ಟ ಪದ್ಧತಿ ಇದೆ.
ಒಟ್ಟು 10 ದಿನ ಜರುಗುವ ಜಾತ್ರೆಯಲ್ಲಿ ಪ್ರತಿದಿನ ಬ್ರಹ್ಮೋತ್ಸವ, ವಿವಿಧ ವಾಹನೋತ್ಸವ, ವೆಂಕಟೇಶ್ವರ ದೇವರ ಉತ್ಸವ ಮೂರ್ತಿ ಮೆರವಣಿಗೆ ಹಾಗೂ ಮಾ.28ರಂದು ಲಲಿತ ಓಕುಳಿ ಜರುಗಲಿದೆ. ಭಕ್ತರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಭಕ್ತಿ-ಭಾವದಿಂದ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.