ಡಿಸಿ ಮೊಹಮ್ಮದ ರೋಷನ್ ಆದೇಶ  
ಬೆಳಗಾವಿ

ಜಿಲ್ಲೆಯಾದ್ಯಂತ ಡಿಜೆ ಸೌಂಡ್ ಸಿಸ್ಟಂ ಬಳಕೆ ನಿಷೇಧ

ಬೆಳಗಾವಿ: ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ಡಿಜೆ ಸೌಂಡ್ ಸಿಸ್ಟಂ, ಹೆಚ್ಚಿನ ಡೆಸಿಬಲ್ ಸೌಂಡ್ ಸಾಧನ ಬಳಕೆ ನಿಷೇಧಿಸಿ ಶುಕ್ರವಾರ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಹಬ್ಬ, ಮೆರವಣಿಗೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಹೆಚ್ಚಿನ ಡೆಸಿಬಲ್ ಡಿಜೆ ಸೌಂಡ್ ಸಿಸ್ಟಂ ಅತಿಯಾಗಿ ಬಳಕೆ ಮಾಡುತ್ತಿರುವುದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುತ್ತಿದೆ. ಅತಿಯಾದ ಶಬ್ದ ಮಾಲೀನ್ಯ ಪ್ರಾಣಕ್ಕೆ ಕುತ್ತು ತರುತ್ತಿರುವ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತ, ಜಿಲ್ಲಾ ಪೊಲೀಷ್ ವರಿಷ್ಠಾಧಿಕಾರಿ ವರದಿ ಸಲ್ಲಿಸಿದ್ದಾರೆ. ಈ ವರದಿ ಆಧಾರದ ಮೇಲೆ ಡಿಜಿ ನಿಷೇಧಿಸಲಾಗಿದೆ.
ನಗರ, ಗ್ರಾಮೀಣ ಭಾಗದಲ್ಲಿ ಜನವಸತಿ ಪ್ರದೇಶ, ಆಸ್ಪತ್ರೆ, ನ್ಯಾಯಾಲಯ, ಶಾಲಾ-ಕಾಲೇಜುಗಳು, ಧಾರ್ಮಿಕ ಸಂಸ್ಥೆಗಳಿಂದ 100 ಮೀಟರ್ ವ್ಯಾಪ್ತಿಯ ಪ್ರದೇಶ, ರಸ್ತೆ ಸಂಚಾರ ದಟ್ಟಣೆ ಪ್ರದೇಶ, ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರೀತಿಯ ಡಿಜೆ ಬಳಕೆ ಮಾಡುವಂತಿಲ್ಲ. ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ, ಆಚರಣೆ ಕಾರ್ಯಕ್ರಮಕ್ಕೆ ಅವಶ್ಯವಿದ್ದಲ್ಲಿ ಪೂರ್ವಭಾವಿಯಾಗಿ ಲಿಖಿತ ರೂಪದಲ್ಲಿ ಕಡಿಮೆ ಶಬ್ದ ಸೌಂಡ್ ಸಿಸ್ಟಂ ಬಳಕೆ ಕುರಿತು ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ಅನುಮತಿ ಪಡೆದುಕೊಳ್ಳಬೇಕು. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.