ಬೈಲಹೊಂಗಲ ನಗರದ ಮಹಾದೇವಿಸ್ವಾಮಿ ಮಠದ ಬಳಿಯ ಹರಕುಣಿ ಕಾಲನಿಯಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ಒಳಚರಂಡಿ ಕೊಳಚೆ ನೀರು. 
ಬೆಳಗಾವಿ

ರಸ್ತೆ ಮೇಲೆ ಹರಿಯುತ್ತಿರುವ ಒಳಚರಂಡಿ ನೀರು

ಚನ್ನಬಸಪ್ಪ ಬಾಳಪ್ಪ ರೊಟ್ಟಿ
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ನಗರದ ಮಹಾದೇವಿಸ್ವಾಮಿ ಮಠದ ಬಳಿಯ ಹರಕುಣಿ ಕಾಲನಿ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಮೇಲಿಂದ ಮೇಲೆ ಒಳಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಣೆಗೊಂಡು ರಸ್ತೆ ಮೇಲೆಯೇ ನೀರು ಹರಿಯುತ್ತಿದೆ. ಇದು ಸ್ಥಳೀಯರಲ್ಲಿ ಅನಾರೋಗ್ಯ ಭೀತಿ ಮೂಡಿಸಿದೆ.
ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಒಳಚರಂಡಿ ನೀರು ವಾಣಿಜ್ಯ ಮಳಿಗೆಗಳಿಗೂ ನುಗ್ಗುತ್ತಿದೆ. ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಮಹಾಂತೇಶ ಹರಕುಣಿ ದೂರಿದರು.
ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವ ಪರಿಣಾಮ ದುರ್ವಾಸನೆ ಬೀರುತ್ತಿದೆ. ಅನಾರೋಗ್ಯದ ಭೀತಿಯಲ್ಲಿ ಸಾರ್ವಜನಿಕರು ದಿನ ಕಳೆಯುವಂತಾಗಿದೆ. ಈಗಲಾದರೂ ಅಧಿಕಾರಿಗಳು ಸಮಸ್ಯೆಯತ್ತ ಗಮನಹರಿಸಿ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮುಖಂಡರಾದ ರಾಮಣ್ಣ ಗುಡದಾರಿ, ನಾಗೇಶ ಗುಂಡ್ಲೂರ, ಮಹೇಶ ಬೆಳಗಾವಿ, ಬಸವರಾಜ ಹರಕುಣಿ ಗಂಗಪ್ಪ ಕಂಠಿ, ಬಸವರಾಜ ಉಳ್ಳೇಗಡ್ಡಿ, ಮೂಗಪ್ಪ ತೂಕಮ್ಮನವರ, ವಾಹೀದ್ ಮುಲ್ಲಾ, ರವಿ ಕಂಠಿ ಎಚ್ಚರಿಸಿದ್ದಾರೆ.