ನಗರದ ಕುಮಾರ ಸ್ವಾಮಿ ಬಡಾವಣೆ ಮರಗಳ ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ
ಬೆಳಗಾವಿ: ಗುರುವಾರ ರಾತ್ರಿ ನಗರದಲ್ಲಿ ಸುರಿದ ಮಳೆಗೆ ಕುಮಾರಸ್ವಾಮಿ ಬಡಾವಣೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಲವು ಮರಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮರಗಳು ರಸ್ತೆ ಮಧ್ಯೆ ಬಿದ್ದಿದ್ದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತುರ್ತು ಕಾರ್ಯಾಚರಣೆ ಕೈಗೊಂಡು ಯಂತ್ರೋಪಕರಣಗಳ ನೆರವಿನಿಂದ ಸುಮಾರು ಎರಡು ಗಂಟೆಗಳೊಳಗೆ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ, ಸಂಚಾರವನ್ನು ಪುನಃ ಸಹಜ ಸ್ಥಿತಿಗೆ ತರಲಾಗಿದರ ಎಂದು ಪಾಲಿಕೆ ಪರಿಸರ ವಿಭಾಗದ ಇಂಜಿನಿಯರ್ ಹನುಮಂತ ಕಲಾದಗಿ ತಿಳಿಸಿದ್ದಾರೆ.
ಪಾಲಿಕೆ ಸಿಬ್ಬಂದಿಯ ತ್ವರಿತ ಸ್ಪಂದನೆಯಿಂದ ನಗರದಲ್ಲಿ ಉಂಟಾಗಿದ್ದ ಸಂಚಾರದ ಅಡಚಣೆ ಶೀಘ್ರದಲ್ಲೇ ನಿವಾರಣೆಯಾಯಿತು.
ಇದೇ ಸಂದರ್ಭದಲ್ಲಿ ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಮರಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.