ಯರಗಟ್ಟಿ ಪಟ್ಟಣದಲ್ಲಿ ಗಾಗಿ ಪರದಾಟ
ಬೆಳಗಾವಿ: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಗೆ ತೆರಳಿದ ಸಾವಿರಾರು ಅಭ್ಯರ್ಥಿಗಳು ಭಾನುವಾರ ಸಾರಿಗೆ ವ್ಯವಸ್ಥೆಯ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದರು. ಪರೀಕ್ಷಾ ಕೇಂದ್ರಗಳಿಗೆ ಬೆಳಗ್ಗೆ 8 ಗಂಟೆಯೊಳಗೆ ಹಾಜರಾಗುವಂತೆ ಸೂಚನೆ ಇದ್ದರೂ, ಗ್ರಾಮೀಣ ಪ್ರದೇಶಗಳಿಂದ ಸಮರ್ಪಕ ಬಸ್‌ಗಳಿಲ್ಲದ ಕಾರಣ ಅಭ್ಯರ್ಥಿಗಳು ಪರದಾಡುವಂತಾಯಿತು.
ರಾಮದುರ್ಗ, ಸವದತ್ತಿ, ಯರಗಟ್ಟಿ, ಮೂಡಲಗಿ, ಗೋಕಾಕ, ಬೈಲಹೊಂಗಲ ಸೇರಿದಂತೆ ವಿವಿಧ ತಾಲೂಕುಗಳಿಂದ ಬಂದ ಅಭ್ಯರ್ಥಿಗಳು ಬೆಳಗ್ಗೆ 6 ಗಂಟೆಯಿಂದಲೇ ಬಸ್ ನಿಲ್ದಾಣಗಳಲ್ಲಿ ಕಾದರೂ, ನಿರೀಕ್ಷಿತ ಸಂಖ್ಯೆಯಲ್ಲಿ ಬಸ್‌ಗಳು ಲಭ್ಯವಾಗಲಿಲ್ಲ. ಇದರಿಂದ ಹಲವರು ಆತಂಕದ ನಡುವೆ ದುಬಾರಿ ದರ ನೀಡಿ ಖಾಸಗಿ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳತ್ತ ತೆರಳಿದರು.
ಬೆಳಗಾವಿ ನಗರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅಭ್ಯರ್ಥಿಗಳು ಮತ್ತು ಅವರ ಕುಟುಂಬಸ್ಥರು ಸಾಕಷ್ಟು ತೊಂದರೆ ಅನುಭವಿಸಿದರು. ಪರೀಕ್ಷೆಯ ದಿನದ ಅಗತ್ಯವನ್ನು ಮನಗಂಡು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡದಿರುವುದಕ್ಕೆ ಅಭ್ಯರ್ಥಿಗಳು ಸಾರಿಗೆ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಆಗಮಿಸುವುದು ಮೊದಲೇ ತಿಳಿದಿದ್ದರೂ, ಅದರ ಅನುಗುಣವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸದಿರುವುದು ಪ್ರಶ್ನೆಗೆ ಕಾರಣವಾಗಿದೆ. ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿ ಅಭ್ಯರ್ಥಿಗಳ ಅನುಕೂಲಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಪಾಲಕರು ಆಗ್ರಹ ಕೇಳಿಬಂದಿದೆ.