ಮತ್ತಿಕೊಪ್ಪದ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಎಚ್.ಡಿ.ಕೋಳೆಕರ ಉದ್ಘಾಟಿಸಿದರು.
ಬೆಳಗಾವಿ: ದೇಸಿ ತಳಿಗಳು ಪೋಷಕಾಂಶಗಳ ಆಗರವಾಗಿದ್ದು, ಔಷಧ ಗುಣಧರ್ಮ ಹೊಂದಿವೆ. ಕಡಿಮೆ ತೇವಾಂಶ ಮತ್ತು ಕಡಿಮೆ ಫಲವತ್ತತೆಯಲ್ಲೂ ತ್ತಮವಾಗಿ ಬೆಳೆಯುವ ಸಾಮರ್ಥ್ಯ ಇವುಗಳ ವಿಶೇಷತೆಯಾಗಿದ್ದು, ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಇವುಗಳ ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ ತಿಳಿಸಿದರು.
ಮತ್ತಿಕೊಪ್ಪದ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಯೋಜನೆ ಅಡಿಯಲ್ಲಿ ದೇಸಿ ತಳಿ ಕೃಷಿ ಪದ್ಧತಿ ಕುರಿತು ಬುಧವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶ. ಕೃಷಿ ನಮ್ಮ ಆರ್ಥಿಕತೆಯ ಬೆನ್ನೆಲುಬು. ಹಿಂದಿನ ಕಾಲದಲ್ಲಿ ರೈತರು ಸ್ಥಳೀಯ ಜಾತಿಯ ಬೀಜಗಳನ್ನು ಬಳಸಿ ರಾಗಿ, ಜೋಳ, ನವಣೆ, ಸಜ್ಜೆ ಮತ್ತು ಸ್ಥಳೀಯ ಅಕ್ಕಿಗಳನ್ನು ಬೆಳೆದಿದ್ದರು. ಇವು ಕಡಿಮೆ ನೀರಿನಲ್ಲಿಯೇ ಬೆಳೆಯುವ ಹಾಗೂ ಬರ ಅತಿಮಳೆಯಂತಹ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು.
ಧಾರವಾಡ ಕೃಷಿ ವಿವಿಯ ಡಾ.ಎನ್.ಜಿ. ಹನಮರಹಟ್ಟಿ ‘ಜೋಳದ ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಮತ್ತು ಉಪಯೋಗ’ ಡಾ.ಶಂಕರ ಲಂಗಟಿ ‘ದೇಸಿ ಭತ್ತದ ತಳಿಗಳು ಹಾಗೂ ಅವುಗಳ ವೈಶಿಷ್ಟೃ’ ಹಾಗೂ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಸಿ.ಐ.ಹೂಗಾರ ‘ಸಾಂಪ್ರದಾಯಿಕ ದೇಸಿ ತಳಿಗಳ ಸಂರಕ್ಷಣೆಯಲ್ಲಿ ಇಲಾಖೆಯ ಕೈಗೊಳ್ಳುತ್ತಿರುವ ಕ್ರಮ’ ಹಾಗೂ ಜಿ.ಬಿ.ವಿಶ್ವನಾಥ ರೈತರಿಗೆ ಸಲಹೆಗಳ ಕುರಿತು ಮಾತನಾಡಿದರು.
ಎಸ್.ಎಂ.ವಾರದ ಸ್ವಾಗತಿಸಿದರು. ಶಂಕರಗೌಡ ಪಾಟೀಲ ವಂದಿಸಿದರು.