ಸಾವು 
ಬೆಳಗಾವಿ

ರಸ್ತೆ ಅಪಘಾತದಲ್ಲಿ ಮೂವರು ಸಾವು

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಗುರುವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಎಂಟು ಜನ ಗಾಯಗೊಂಡಿರುವ ಘಟನೆ ನಡೆದಿವೆ.
ಚಿಕ್ಕೋಡಿ ತಾಲೂಕಿನ ಜೋಡಟ್ಟಿ -ಕಬ್ಬೂರ ಸಂಭವಿಸಿದ ಅಪಘಾತದಲ್ಲಿ ಕೇರೂರ ಗ್ರಾಮದ ಮಲ್ಲಿಕಾರ್ಜುನ ಕಡಲಗಿ (20) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಹಿಂಬದಿ ಸವಾರ ವಿಠ್ಠಲ ಅಥಣಿ (20) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಯರಗಟ್ಟಿ ತಾಲೂಕಿನ ರೈನಾಪುರ ಕ್ರಾಸ್ ಬಳಿ ಗೋಕಾಕ-ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಕ್ಕಿಸಾಗರ ಗ್ರಾಮದ ಪ್ರದೀಪ ದೇಸಾಯಿ (28) ಮೃತಪಟ್ಟಿದ್ದಾನೆ. ಮದ್ಲೂರ ಗ್ರಾಮದ ದ್ಯಾಮಣ್ಣ ಮುತ್ತೆನ್ನವರ (26) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇನ್ನೊಂದು ಘಟನೆಯಲ್ಲಿ ಯರಗಟ್ಟಿ ತಾಲೂಕಿನ ಮುಳವಳ್ಳಿ- ಯರಗಟ್ಟಿ ಮುಖ್ಯ ರಸ್ತೆಯಲ್ಲಿ ಗೂಡ್ಸ್ ಮತ್ತು ಟಂಟಂ ನಡುವೆ ಸಂಭವಿಸಿದ ಅಪಘಾತದಲ್ಲಿ ಚುಮಚನೂರು ಗ್ರಾಮದ ಗುರುಪಾದಯ್ಯ ಖೋದನಾಪುರ (50) ಮೃತಪಟ್ಟಿದ್ದಾರೆ. ಟಂಟಂ ವಾಹನದಲ್ಲಿದ್ದ ಚಾಲಕ ಶಿವಾನಂದ ಚುಂಗಿನ, ರವಿಕುಮಾರ ಸಾವಳಗಿ, ವಿಠ್ಠಲ ಸಾವಳಗಿ, ಶಿವಕುಮಾರ ಸಾವಳಗಿ, ಕರೆಪ್ಪ ದಡ್ಡಿ, ರೇಣವ್ವ ಸಾವಳಗಿ ಗಾಯಗೊಂಡಿದ್ದಾರೆ. ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.