ಬೆಳಗಾವಿಯ ವಿಟಿಯುದಲ್ಲಿ ಗುರುವಾರ ಜರುಗಿದ ರಾಷ್ಟ್ರೀಯ ಇಂಜಿನಿಯರಿಂಗ್ ಗ್ರಂಥಪಾಲಕತ್ವ ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರೊ.ಮುತ್ತಯ್ಯ ಕೊಗನೂರಮಠ, ಡಾ.ಎಸ್.ವಿದ್ಯಾಶಂಕರ, ಡಾ.ಪ್ರಶಾಂತ ನಾಯಕ, ಪ್ರೊ.ನಾಗರಾಜಪ್ಪ, ಡಾ.ಸಿದ್ದಲಿಂಗಯ್ಯ ಇತರರಿದ್ದರು.
ಬೆಳಗಾವಿ: ಇಂಜಿನಿಯರಿಂಗ್ ಗ್ರಂಥಾಲಯ ಶಾಸ್ತ್ರದಲ್ಲಿ ನಡೆಯುತ್ತಿರುವ ಸಮಕಾಲೀನ ಬದಲಾವಣೆಗಳು ಮತ್ತು ಮಾಹಿತಿ ನಿರ್ವಹಣೆಯ ಹೊಸ ಆಯಾಮಗಳನ್ನು ವಿದ್ಯಾರ್ಥಿಗಳು ಅರಿತುಕೊಂಡಲ್ಲಿ ತಮ್ಮ ಸಂಶೋಧನೆಗೆ ಅನುಕೂಲವಾಗುತ್ತದೆ ಎಂದು ವಿಟಿಯು ಕನ್ಸೋರ್ಟಿಯಂ ಸಲಹೆಗಾರ ಪ್ರೊ.ಮುತ್ತಯ್ಯ ಕೊಗನೂರಮಠ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಸ್.ಜಿ.ಬಾಳೇಕುಂದ್ರಿ ಕೇಂದ್ರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಆಯೋಜಿಸಲಾದ ಮೂರು ದಿನಗಳ ರಾಷ್ಟ್ರೀಯ ಇಂಜಿನಿಯರಿಂಗ್ ಗ್ರಂಥಪಾಲಕತ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯ ಸೇವೆಗಳ ಡಿಜಿಟಲ್ ಪರಿವರ್ತನೆ, ಜ್ಞಾನ ನಿರ್ವಹಣೆ ಮತ್ತು ಸಂಶೋಧನೆಗೆ ಬೆಂಬಲ ನೀಡುವ ಸೇವೆಗಳು, ಇ-ಸಂಪನ್ಮೂಲ ಪ್ರವೇಶ, ಕನ್ಸೋರ್ಟಿಯಂ ಆಧಾರಿತ ಸಂಪನ್ಮೂಲಗಳು ಮತ್ತು ಡೇಟಾಬೇಸ್ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ ಮಾತನಾಡಿ, ಇವತ್ತಿನ ಬದಲಾದ ಸನ್ನಿವೇಶದಲ್ಲಿ ಗ್ರಂಥಪಾಲಕರು ಕೇವಲ ಗ್ರಂಥಾಲಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಓದಲು ಪ್ರೇರೆಪಿಸುವಂತಹ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.
ವಿಟಿಯು ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ, ದಾವಣಗೆರೆ ಘಟಕ ಕಾಲೇಜ್ ಪ್ರಾಚಾರ್ಯ ಪ್ರೊ.ನಾಗರಾಜಪ್ಪ ಇತರರಿದ್ದರು.
ಕುಲಸಚಿವ ಪ್ರೊ.ಪ್ರಸಾದ ರಾಂಪುರೆ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಉಜ್ವಲ್ ಯು.ಜೆ. ವಂದಿಸಿದರು. ಸಮ್ಮೇಳನದ ಸಂಯೋಜನಾಧಿಕಾರಿ ಡಾ.ಸೋಮರಾಯ ತಳ್ಳೊಳ್ಳಿ ಅತಿಥಿಗಳನ್ನು ಪರಿಚಯಸಿದರು. ಸಮ್ಮೇಳನದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು.