ಬೆಳಗಾವಿ ನಗರದ ಪ್ರವಾಸಿ ಮಂದಿರ ಸುದ್ದಿಗೋಷ್ಠಿಯಲ್ಲಿ ಅಡಿವೇಶ ಇಟಗಿ ಮಾತನಾಡಿದರು. ವಿರೂಪಾಕ್ಷಗೌಡ ಪಾಟೀಲ, ಮೇಘನಾ ಹಿರೇಮಠ, ರೇಣುಕಾ ಎಚ್. ಪುತ್ರಣ ಇತರರಿದ್ದರು.
ಬೆಳಗಾವಿ: ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸಾಮಾಜಿಕ ಅರಿವು ಬೆಳೆಸುವ ಉದ್ದೇಶದಿಂದ ಬೆಳಗಾವಿ ನಗರದಲ್ಲಿ ಮೂರು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೆ ಮಕ್ಕಳನ್ನು ಬೆಸೆಯುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ.ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಮೂಲಸೌಕರ್ಯ, ವಾತಾವರಣ ಹಾಗೂ ಇತರ ಸೌಲಭ್ಯಗಳು ಲಭ್ಯವಿರುವುದರಿಂದ ಸಮ್ಮೇಳನಕ್ಕೆ ಬೆಳಗಾವಿಯನ್ನು ಆಯ್ಕೆ ಮಾಡಲಾಗಿದೆ. ನವೆಂಬರ ಕೊನೆಯ ವಾರದಲ್ಲಿ ನಗರದ ಸಿಪಿಎಡ್ ಮೈದಾನದಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿದಿನ ಸುಮಾರು 10ರಿಂದ 15 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಮಕ್ಕಳಿಗಾಗಿ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮಕ್ಕಳಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ಪರಿಚಯ ಮಾಡಿಕೊಡುವುದರ ಜತೆಗೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಮೌಲ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹಾಗೂ ಸೃಜನಶೀಲ ಚಿಂತನೆಗೆ ಉತ್ತೇಜನ ನೀಡುವುದು ಕೂಡ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದರು.
ಮೊಬೈಲ್ ಬಳಕೆ ಕುರಿತು ಜಾಗೃತಿ:ಇಂದಿನ ದಿನಗಳಲ್ಲಿ ಮಕ್ಕಳ ಮೇಲೆ ಮೊಬೈಲ್ ಹಾಗೂ ಡಿಜಿಟಲ್ ಸಾಧನಗಳ ಬಳಕೆಯ ಪರಿಣಾಮ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ಸಮ್ಮೇಳನದಲ್ಲಿ ವಿಶೇಷವಾಗಿ ಜಾಗೃತಿ ಮೂಡಿಸಲಾಗುವುದು.ಬಾಲ್ಯವಿವಾಹ ತಡೆ ಹಾಗೂ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಶೋಷಣೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ವಿರೂಪಾಕ್ಷಗೌಡ ಪಾಟೀಲ, ಮೇಘನಾ ಹಿರೇಮಠ, ರೇಣುಕಾ ಎಚ್. ಪುತ್ರಣ ಇತರರಿದ್ದರು.