ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ಬೈಕ್​ಗಳು. 
ಬೆಳಗಾವಿ

ಮೂವರು ಬೈಕ್​ ಕಳ್ಳರ ಬಂಧನ

ಬೆಳಗಾವಿ: ಒಂದು ಬೈಕ್​ ಕಳ್ಳತನದ ತನಿಖೆ ಬೆನ್ನತ್ತಿದ್ದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು, ಮೂವರು ಬೈಕ್​ ಕಳ್ಳರನ್ನು ಬಂಧಿಸಿ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ 11.37 ಲಕ್ಷ ರೂ. ಮೌಲ್ಯದ 20 ಬೈಕ್​ ವಶಕ್ಕೆ ಪಡೆದಿದ್ದಾರೆ.
ಗೋಕಾಕ ತಾಲೂಕಿನ ಹಿರೇಹಟ್ಟಿಯ ಫಕೀರಪ್ಪ ಸಿದ್ದಪ್ಪ ಕರಿಗಾರ (25), ಹುಕ್ಕೇರಿ ತಾಲೂಕಿನ ಆಲದಾಳದ ರಮೇಶ ಪ್ರಭು ಪಾಟೀಲ (23), ಬೆಳಗಾವಿ ತಾಲೂಕು ಕೆಂಚನಟ್ಟಿಯ ಕಮಲಪ್ಪ ಉ್​ರ್ ಕಮಲು ಯಲ್ಲಪ್ಪ ಗುಂಡ್ಯಾಗೋಳ, (38) ಬಂಧಿತರು.
ಈಚೆಗೆ ಯಳ್ಳೂರ ಗ್ರಾಮದಲ್ಲಿ ಬೈಕ್​ ಕಳವಾದ ಬಗ್ಗೆ ಹೊನಗಾದ ದಿಲೀಪ್​ ಜಾಧವ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಈ ಮೂವರೂ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇದೇ ಠಾಣೆ ವ್ಯಾಪ್ತಿಯ 2, ಟಿಳಕವಾಡಿ, ಶಹಾಪುರ, ಹುಕ್ಕೇರಿ ಠಾಣೆ ವ್ಯಾಪ್ತಿಯ ತಲಾ 1 ಹಾಗೂ ವಿವಿಧೆಡೆ 15 ಬೈಕ್​ಗಳನ್ನು ಕದ್ದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಅಕ್ರಮ ಸಾರಾಯಿ ಮಾರಾಟ: ಎಪಿಎಂಸಿ ಠಾಣೆ ಪೊಲೀಸರು ದಾಳಿ ಮಾಡಿ, ಬಾಕ್ಸೆಟ್​ ರಸ್ತೆಯ ಸಹ್ಯಾದ್ರಿ ನಗರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಸುಳಗಾದ ಗೌತಮ ಕಲ್ಲಪ್ಪ ಕಲಕಾಂಬಕರ (24) ಹಾಗೂ ಸತೀಶ ಯಲ್ಲಪ್ಪ ಚೌಗಲಾ(29)ನನ್ನು ವಶಕ್ಕೆ ಪಡೆದು, 20,326ರೂ. ಮೌಲ್ಯದ ಮದ್ಯ ಮತ್ತು ಬೀಯರ್​ ವಶಪಡಿಸಿಕೊಂಡಿದ್ದಾರೆ.
ಮಟ್ಕಾ ದಾಳಿ: ರವಿವಾರ ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಡುತ್ತಿದ್ದ ಮಹಾದ್ವಾರ ರಸ್ತೆಯ ಪ್ರಶಾಂತ ಭರಮಾ ಪಾಟೀಲ (29), ಕಾಮತಗಲ್ಲಿಯ ಪ್ರತಿಕ ಮೋಹನ ಜಾಧವ (35) ಹಾಗೂ ಗಜಾನನ ಶಶಿಕಾಂತ ಗರಡೆ ವಿರುದ್ಧ ಮಾರ್ಕೆಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.