ರಾಹುಲ ಶಿಂಧೆ 
ಬೆಳಗಾವಿ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಿರಲಿ

ಬೆಳಗಾವಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಜತೆಗೆ ಖರೀದಿಸಿದ ಔಷಧ ಮಾಹಿತಿ ಇ-ಪೋರ್ಟಲ್‌ನಲ್ಲಿ ದಾಖಲಿಸಲಿ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನಡಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಕಾರ್ಯಕ್ರಮದಡಿ ಎಲ್ಲ ಸಂಸ್ಥೆಗಳಲ್ಲಿ ಅನುದಾನ ಲಭ್ಯವಿದ್ದು, ಸಮರ್ಪಕವಾಗಿ ಬಳಸಬೇಕು ಎಂದರು.
ಪ್ರಸ್ತುತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಖಾಲಿ ಹುದ್ದೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು 3 ದಿನದೊಳಗೆ ಪ್ರಕಟಣೆ ಹೊರಡಿಸಬೇಕು. ಖಾಲಿ ಹುದ್ದೆ ಭರ್ತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕ್ರಮವಹಿಸಬೇಕು. ನಿರ್ಲಕ್ಷೃ ಮಾಡಬಾರದು. ವಿಶೇಷ ಜಯಂತಿಗಳಂದು ಆರೋಗ್ಯ ಇಲಾಖೆಯಿಂದ ರಕ್ತದಾನ ಶಿಬಿರ ಆಯೋಜಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ.ಗಡಾದ, ಚಿಕ್ಕೋಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಪರ ಅಧಿಕಾರಿ ಡಾ.ಎಸ್.ಎಸ್.ಗಡೇದ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಜಗದೀಶ ಗಾಣಗಿ ಇತರರಿದ್ದರು.

ಕುಡಿಯುವ ನೀರಿನ ಪರೀಕ್ಷೆ ನಡೆಸಿ

ಎಲ್ಲ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ತಂಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ 2 ತಿಂಗಳಿಗೊಮ್ಮೆ ತಮ್ಮ ತಾಲೂಕಿನಲ್ಲಿರುವ ಎಲ್ಲ ವಸತಿ ನಿಲಯಗಳಿಗೆ ಭೇಟಿ ನೀಡಬೇಕು. ಕುಡಿಯುವ ನೀರಿನ ಮಾದರಿ ಪರೀಕ್ಷೆ ಮತ್ತು ಮಕ್ಕಳ ಮಾನಸಿಕ ಆರೋಗ್ಯ ಕುರಿತು ತಪಾಸಣೆ ನಡೆಸಬೇಕು. ಈ ಬಗ್ಗೆ ಜಿಲ್ಲಾ ಸಮೀಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸಿಇಒ ರಾಹುಲ ಶಿಂಧೆ ಸೂಚಿಸಿದರು.