ಬೆಳಗಾವಿ ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎಚ್.ಡಿ.ಕೋಳೇಕರ ಮಾತನಾಡಿದರು. ಸಲೀಂ ಸಂಗಟರಸ್, ಸಹದೇವ ಯರಗೊಪ್ಪ, ಮಹಾದೇವ ಪಟಗುಂದಿ, ಬಸವರಾಜ ಅಂಗಡಿ, ಚಿ.ಐ.ಹುಗಾರ ಇತರರಿದ್ದರು. 
ಬೆಳಗಾವಿ

ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಕೊರತೆಯಾಗದಿರಲಿ

ಬೆಳಗಾವಿ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಾಗದಂತೆ ಮಾರಾಟಗಾರರು ಎಚ್ಚರ ವಹಿಸಬೇಕು. ಬೇರೆ ರಾಜ್ಯ, ಜಿಲ್ಲೆಯ ರೈತರಿಗೆ ರಸಗೊಬ್ಬರ ಮಾರಿದರೆ ಕ್ರಮ ವಹಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ ಎಚ್ಚರಿಕೆ ನೀಡಿದರು.
ನಗರ ಕೃಷಿ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಸಗೊಬ್ಬರ ಪೂರೈಕೆದಾರರು, ಮಾರಾಟಗಾರರು ಹಾಗೂ ಅಧಿಕಾರಿ, ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಹಂಗಾಮು ಆರಂಭಕ್ಕೂ ಮುನ್ನ ಎಲ್ಲ ರಸಗೊಬ್ಬರಗಳ ಸಂಗ್ರಹಣೆ, ಪೋಟ್ಯಾಷ್ ಗೊಬ್ಬರದ ಬಳಕೆಗೆ ಉತ್ತೇಜನ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಧರತಿ ಮಾತಾ ಬಚಾವೋ ಆಂದೋಲನ ಮೂಲಕ ರೈತರಲ್ಲಿ ಸಮತೋಲಿತ ಪೋಷಕಾಂಶಗಳ ಬಳಕೆ ಕುರಿತು ಅರಿವು ಮೂಡಿಸಬೇಕು ಎಂದರು. ಜಿಲ್ಲೆಯಲ್ಲಿ ರಸಗೊಬ್ಬರದ ದಾಸ್ತಾನು ಇದ್ದು, ಖರೀದಿ ಮಾಡಿ ಅನವಶ್ಯಕವಾಗಿ ಸಂಗ್ರಹಣೆ ಮಾಡಬಾರದು. ಈ ವರ್ಷ ಕಂಪ್ಯೂಟರ್ ಆ್ಯಪ್ ಮೂಲಕ ಯೂರಿಯಾ ರಸಗೊಬ್ಬರ ವಿತರಣೆ ಕೈಗೊಳ್ಳಲು ಸರ್ಕಾರದಿಂದ ನಿರ್ದೇಶನ ಇದ್ದು, ರೈತರು ಕ್ಷೇತ್ರಕ್ಕೆ ಬೇಕಾದ ರಸಗೊಬ್ಬರಗಳನ್ನು ಕಾಲಾನುಸಾರ ಪಡೆಯಲು ಅರ್ಹರಿರುತ್ತಾರೆ ಎಂದು ಹೇಳಿದರು.
ವಿವಿಧ ಕೈಗಾರಿಕೆಗಳಿಗೆ ಕೃಷಿಗೆ ಬಳಸುವ ರಸಗೊಬ್ಬರಗಳ ಪೂರೈಕೆ ಆಗದಂತೆ ಕ್ರಮಕೈಗೊಳ್ಳ ಬೇಕು. ಯೂರಿಯಾ ಪರ್ಯಾಯವಾಗಿ ನ್ಯಾನೋ ಯೂರಿಯಾ, ಅಮೋನಿಯಮ್ ಸಲ್ಫೇಟ್ ಬಳಸಬೇಕು. ಕಾಂಪ್ಲೆಕ್ಸ್ ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಬೇಕು. ಸಾವಯವ ಗೊಬ್ಬರಗಳಾದ ರೈಜೋಬಿಯಮ್, ಅಜಿಟೊಬ್ಯಾಕ್ಟರ್, ಅಜೊಸ್ಟಿರಿಲ್ಲಂ ಮತ್ತು ಪಿಎಸ್‌ಬಿ ಬಳಕೆಗೆ ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದರು.
ಉಪನಿರ್ದೇಶಕ ಸಲೀಂ ಸಂಗಟರಸ್, ಸಹದೇವ ಯರಗೊಪ್ಪ, ಮಹಾದೇವ ಪಟಗುಂದಿ, ಬಸವರಾಜ ಅಂಗಡಿ, ಚಿ.ಐ.ಹೂಗಾರ ಇತರರಿದ್ದರು.