ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಅರುಣ ಶಹಾಪುರ, ಮೋಹನ ಮೋರೆ, ಮಹೇಶ ಭಾತೆ, ರಮೇಶ ಪರವಿನಾಯ್ಕರ ಇತರರಿದ್ದರು. 
ಬೆಳಗಾವಿ

ಜಿಪಂ, ತಾಪಂ ಚುನಾವಣೆಗೆ ಪ್ರತ್ಯೇಕ ಕಾನೂನಿರಲಿ

ಬೆಳಗಾವಿ : ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಕಾಲಮಿತಿಯೊಳಗಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ವಿಧಾನಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗೆ ಕಾಲಮಿತಿಯಲ್ಲಿ ಚುನಾವಣೆ ಜರುಗುತ್ತವೆ. ಅದೇ ಮಾದರಿಯಲ್ಲಿ ಜಿಪಂ, ತಾಪಂ, ಗ್ರಾಪಂ ಚುನಾವಣೆ ನಡೆಸುವುದು ಅವಶ್ಯವಾಗಿದೆ. ಸರ್ಕಾರ ಏಪ್ರೀಲ್, ಮೇ ತಿಂಗಳಿನಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದ್ದು, ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು ಎಂದರು.
ಜಿಪಂ, ತಾಪಂ ಚುನಾವಣೆ ನಡೆಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕಿದ್ದ ರಾಜ್ಯ ಸರ್ಕಾರ ಮೀಸಲಾತಿ ನೆಪದಲ್ಲಿ ನಾಲ್ಕು ವರ್ಷದಿಂದ ಚುನಾವಣೆ ನಡೆಸಿಲ್ಲ. ಇದೇ ಕಾರಣಕ್ಕೆ ರಾಜ್ಯಕ್ಕೆ ಬರಬೇಕಿದ್ದ 15ನೇ ಹಣಕಾಸು ಆಯೋಗದ 1,279 ಕೋಟಿ ರೂ. ಅನುದಾನ ಬಂದಿಲ್ಲ. ಮೀಸಲಿಟ್ಟಿರುವ ಅನುದಾನವೂ ದುರ್ಬಳಕೆ ಆಗುತ್ತಿರುವ ದೂರುಗಳು ಬಂದಿವೆ.
ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ರಾಜ್ಯ ಚುನಾವಣೆ ಆಯೋಗದಿಂದ ವಾಪಸ್ ಪಡೆದಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಗಳ ಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾಗಿದ್ದ ನ್ಯಾಯಮೂರ್ತಿ ಭಕ್ತ ವತ್ಸಲ ಸಮಿತಿ ಏನು ಶಿಫಾರಸು ಮಾಡಿದೆ, ಅದರ ಬಗ್ಗೆ ಸರ್ಕಾರದ ನಿಲುವು ಏನು ಎಂದು ಪ್ರಶ್ನಿಸಿದರು.
ಸಚಿವರು, ಶಾಸಕರ ಮೌನ ಏಕೆ?: ಪಂಚಾಯತ್ ರಾಜ್ಯ ವ್ಯವಸ್ಥೆ ರಾಜಕಾರಣದಲ್ಲಿ 2ನೇ ಮತ್ತು 3ನೇ ಹಂತದ ರಾಜಕೀಯ ನಾಯಕರ ಬೆಳವಣಿಗೆಗೆ ವೇದಿಕೆಯಾಗಿದೆ. ಈ ಹಿಂದೆ ಜಿಪಂ ಸದಸ್ಯರಾಗಿದ್ದ ಸಚ್ಚಿದಾನಂದ ಖೋತ, ರಾಜು ಕಾಗೆ, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ, ಅಣ್ಣಾಸಾಹೇಬ ಜೊಲ್ಲೆ, ಸುರೇಶ ಮಾರಿಹಾಳ, ಸಿ.ಸಿ.ಪಾಟೀಲ ಹೀಗೆ ಹಲವು ರಾಜಕಾರಣಿಗಳು ಶಾಸಕ, ಸಚಿವರಾಗಿ ಆಯ್ಕೆಯಾದ ಉದಾಹರಣೆಗಳಿವೆ.
ಹೀಗಿದ್ದರೂ ಜಿಪಂ, ತಾಪಂ ಚುನಾವಣೆ ಕುರಿತು ಸಚಿವರು, ಶಾಸಕರು ಮೌನವಹಿಸಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಈ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಕವಟಗಿಮಠ ಆಗ್ರಹಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಜಿಪಂ ಮಾಜಿ ಸದಸ್ಯರಾದ ಮೋಹನ ಮೋರೆ, ಮಹೇಶ ಭಾತೆ, ರಮೇಶ ಪರವಿನಾಯ್ಕರ, ಸುಜಾತಾ ಖೋತ, ತಾಪಂ ಮಾಜಿ ಅಧ್ಯಕ್ಷೆ ಕೆಂಚನ್ನವರ ಇತರರಿದ್ದರು.
ಹೈಕೋರ್ಟ್ ಮೊರೆ ಹೋಗಿದ್ದ ಆಯೋಗ
ರಾಜ್ಯ ಸರ್ಕಾರ 31 ಜಿಲ್ಲೆಗಳ 1,130 ಜಿಪಂ ಹಾಗೂ 239 ತಾಲೂಕುಗಳ 3,671 ತಾಪಂ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಜಿಪಂ, ತಾಪಂ ಕ್ಷೇತ್ರ ಪುನರ್ವಿಂಗಡನೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣೆ ಆಯೋಗ ಹೈಕೋರ್ಟ್ ಮೊರೆಹೋಗಿತ್ತು. ಆ ವೇಳೆ ಒಂದು ತಿಂಗಳ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ 2023ರಲ್ಲಿ ಸರ್ಕಾರ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ, ಇಲ್ಲಿವರೆಗೆ ನಿರ್ಲಕ್ಷ್ಯವಹಿಸಿರುವುದು ಸರಿಯಾದ ಕ್ರಮವಲ್ಲ ಎಂದು ಮಹಾಂತೇಶ ಕವಟಗಿಮಠ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಬೇಡಿಕೆ ಅನಿವಾರ್ಯ

ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಹಾಗೂ ಉತ್ತರ ಕರ್ನಾಟಕ ಜನರ ಆಶೋತ್ತರಗಳಿಗೆ ಸ್ಪಂದಿಸಲೆಂದೇ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ, ಪ್ರತಿ ವರ್ಷ ಚಳಿಗಾಲ ಅಧಿವೇಶನ ನಡೆಸಲಾಗುತ್ತಿದೆ. ಆದರೆ, ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸದೇ ಇರುವುದು ರಾಜ್ಯ ಸರ್ಕಾರದ ಮಲತಾಯ ಧೋರಣೆಗೆ ನಿದರ್ಶನ ಎಂದು ವಿಪ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆರೋಪಿಸಿದರು.ಉತ್ತರ ಕರ್ನಾಟಕದ ಜನತೆ ಪ್ರತ್ಯೇಕತೆ ಬಯಸಿದವರಲ್ಲ, ಆದರೆ, ತಮ್ಮ ಬೇಡಿಕೆ ಈಡೇರದೆ ಭ್ರಮನಿರಸನಗೊಂಡಿದ್ದಾರೆ. ಪ್ರತ್ಯೇಕ ಉ.ಕ ಅಭಿವದ್ಧಿ ನಿಗಮ ಸ್ಥಾಪಿಸುವುದು, ಪ್ರವಾಸೋದ್ಯಮ, ಜಿಲ್ಲಾ ವಿಭಜನೆ ಹಾಗೂ ನಗರದ ಅಭಿವದ್ಧಿ ಎಲ್ಲವೂ ಬಗೆಹರಿಯದಿದ್ದಲ್ಲಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನ ನಿರಥರ್ಕ. ಇದು ಹೀಗೆ ಮುಂದುವರಿದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಗಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಕವಟಗಿಮಠ ಎಚ್ಚರಿಸಿದರು.