ಬೆಳಗಾವಿ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸತೀಶ ಜಾರಕಿಹೊಳಿ ಮಾತನಾಡಿದರು.
ಬೆಳಗಾವಿ:ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದಿರುವ ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಇದೇ ಶಾಸಕರನ್ನು ಸಚಿವರನ್ನಾಗಿ ಮಾಡುವಂತೆ ನಾವು ಯಾರಿಗೂ ಶಿಫಾರಸ್ಸು ಮಾಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಪಕ್ಷದ ವರಿಷ್ಠರು ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದ್ದು, ಶೀಘ್ರವೇ ವಿಸ್ತರಣೆಗೆ ಒಪ್ಪಿಗೆ ನೀಡಲಿದ್ದಾರೆ. ಕೆಲ ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿ ಹೋಗಿ ವರಿಷ್ಠರನ್ನು ಮನವೋಲಿಸುವ ಕೆಲಸ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿಯೇ ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದರಿಂದ ಕನಿಷ್ಠ ಇನ್ನೋಂದು ಸಚಿವ ಸ್ಥಾನ ನೀಡುವಂತೆ ಕೇಳಲಾಗಿದೆ. ಆದರೆ, ಇವರನ್ನೇ ಸಚಿವರನ್ನಾಗಿ ಮಾಡುವಂತೆ ಯಾರ ಬಳಿ ಒತ್ತಡ ಹಾಕಿಲ್ಲ. ಶಾಸಕರಾದ ಅಶೋಕ ಪಟ್ಟಣ ಸೇರಿ ಕೆಲವರು ಸಚಿವ ಸ್ಥಾನದ ವಿಷಯವಾಗಿ ಚರ್ಚಿಸಿರುವುದು ನಿಜ. ನಮ್ಮ ಜಿಲ್ಲೆಯಿಂದ ಮೂವರು ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಸಚಿವ ಸಂಪುಟದ ವಿಷಯದಲ್ಲಿ ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರವು ತಕ್ಷಣ ಸ್ಪಂದಿಸಿದರೆ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ಪ್ರತಿಭಟನೆ ನೀರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿರುವುದು ತಪ್ಪು. ಕೇಂದ್ರ ಇಂತಹ ಸಮಸ್ಯೆಗಳನ್ನು ನಿರ್ಲಕ್ಷೃ ಮಾಡದೆ ಸ್ಪಂದಿಸುವ ಕೆಲಸ ಮಾಡಬೇಕು. ಕಾಂಗ್ರೆಸ್ ಬೆಂಬಲಿಸಿದ್ದು ವಿದ್ಯಾರ್ಥಿಗಳ ಹೋರಾಟವನ್ನು ವಿನಃ ಕಾಕ್ರೋಚ್ ಜನತಾ ಪಾರ್ಟಿ ಅಲ್ಲ ಎಂದು ತಿಳಿಸಿದರು.
ಹಳ್ಳಿಗಳಿಗೂ ವಿಸ್ತರಿಸಿದ ಡ್ರಗ್ಸ್ ಮಾಫಿಯಾ
ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಜಾಲವು ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗುತ್ತಿರುವುದು ಅಪಾಯಕಾರಿಯಾಗಿದ್ದು, ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಡ್ರಗ್ಸ್ ಮಾಫಿಯಾ ವಿರುದ್ದ ಜಗತ್ತಿನ ಹಲವು ರಾಷ್ಟ್ರಗಳು ನಿರಂತರ ಹೋರಾಟ ನಡೆಸುತ್ತಿವೆ. ನೇಪಾಳ, ಅಪಘಾನಿಸ್ತಾನ ಸೇರಿ ವಿವಿಧ ಮೂಲಗಳಿಂದ ದೇಶಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿದೆ. ಇದು ಯಾವುದೇ ಯುದ್ದವಿಲ್ಲದೆ ದೇಶವನ್ನು ದುರ್ಬಲಗೊಳಿಸುವ ಅಪಾಯಕಾರಿ ವ್ಯವಸ್ಥೆಯಾಗಿದೆ. ರಾಜಸ್ಥಾನ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಡ್ರಗ್ಸ್‌ನ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಮಾರ್ಗವಾಗಿ ಕೇರಳಕ್ಕೆ ಡ್ರಗ್ಸ್ ಸಾಗಾಟವಾಗುತ್ತಿರುವ ಮಾಹಿತಿ ಲಭ್ಯವಾಗಿದ್ದು, ಅಕ್ರಮ ಸಾಗಾಟದ ವೇಳೆ ರಾಜ್ಯದಲ್ಲಿ ಹಲವು ಬಾರಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆತಂಕ ವ್ಯಕ್ತಪಡಿಸಿದರು.