ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. 
ಬೆಳಗಾವಿ

ಎಲ್ಲ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ

ಬೆಳಗಾವಿ: ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗೆ ಕುಟುಂಬದಲ್ಲೇ ಟಿಕೆಟ್‌ಗಾಗಿ ಫೈಟ್ ಇತ್ತು. ಹೀಗಾಗಿ, ಕುಟುಂಬದಲ್ಲೇ ಅವಕಾಶ ಕೊಡಲಾಗಿದೆ. ಕುಟುಂಬ ರಾಜಕಾರಣ ನಮ್ಮ ಪಕ್ಷದಲ್ಲಷ್ಟೇ ಇಲ್ಲ. ಎಲ್ಲ ಪಕ್ಷದಲ್ಲೂ ಇದೆ. ಪಕ್ಷದ ರಾಜ್ಯದಲ್ಲೂ ಇದೆ. ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ಚುನಾವಣೆಗೆ ನಿಲ್ಲಿಸಬೇಕಾಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.
ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ನಿರೀಕ್ಷೆಯಂತೆ ಅಭ್ಯರ್ಥಿ ಆಯ್ಕೆ ಆಗಿದೆ. ಹಂತ- ಹಂತವಾಗಿ ಚುನಾವಣೆ ಮಾಡುತ್ತೇವೆ. ಪಕ್ಷದೊಳಗಿನ ಗಲಾಟೆಗಳಿಂದ ಲಾಭವಾಗಿದ್ದು, ನಮ್ಮಲ್ಲಿದ್ದ ಮೂರು ಗುಂಪು, ಈಗ ಒಂದಾಗಿದೆ. ಅಹಿಂದ ಮತಗಳು ಕಾಂಗ್ರೆಸ್ ಪರವಾಗಿಯೇ ಇರುತ್ತವೆ. ಎರಡೂ ಕ್ಷೇತ್ರಗಳಲ್ಲಿ ಗೆಲುವು ಖಚಿತ ಎಂದರು.
ನಾಳೆಯಿಂದ ಬಾಗಲಕೋಟೆಯಲ್ಲಿ ಪ್ರಚಾರ ಆರಂಭಿಸುತ್ತೇನೆ. ದಾವಣಗೆರೆಗೂ ಪ್ರಚಾರಕ್ಕೆ ಹೋಗುತ್ತೇನೆ. ಪಕ್ಷ, ಅಭ್ಯರ್ಥಿ ಜತೆಗೆ ಸರ್ಕಾರವಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲ ನೀಡಲಿವೆ. ಬಾಗಲಕೋಟೆ ಜಿಲ್ಲೆಗೆ ವೈದ್ಯಕೀಯ ಕಾಲೇಜ್ ಆಗಿದೆ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯವರು ಪ್ರಚಾರ ಮಾಡುತ್ತಾರೆ. ನಾವು ಅಹಿಂದ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತೇವೆ. ಎರಡೂ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಸಚಿವಾಲಯದ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ದೊರೆತ್ತಿಲ್ಲ, ನಾನೇ ನೇತೃತ್ವ ವಹಿಸಿಕೊಂಡು ದೆಹಲಿಗೆ ಸರ್ವಪಕ್ಷದ ನಿಯೋಗ ಕೊಂಡ್ಯೊಯ್ಯುತ್ತೇನೆ. ಹಿಪ್ಪರಗಿ ಬ್ಯಾರೇಜ್ನ ಗೇಟ್ ಸಂಖ್ಯೆ 22 ಮುರಿದುಬಿದ್ದ ಪರಿಣಾಮ, ಸುಮಾರು 2.5ರಿಂದ 3.5 ಟಿಎಂಸಿ ನೀರು ವ್ಯರ್ಥವಾಗಿ ಹರಿದಿದೆ. ಇದರಿಂದಾದ ಜಲಸಂಕಷ್ಟ ಪರಿಹರಿಸಲು ಮಹಾರಾಷ್ಟ್ರ ಸರ್ಕಾರದಿಂದ ಹೆಚ್ಚುವರಿ ನೀರನ್ನು ಬಿಡುಗಡೆಗೊಳಿಸುವಂತೆ ಕೋರಲು ಕರ್ನಾಟಕದ ಜನಪ್ರತಿನಿಧಿಗಳ ನಿಯೋಗವು ಮಹಾರಾಷ್ಟ್ರಕ್ಕೆ ಭೇಟಿ ನೀಡಲು ನಿರ್ಧರಿಸಿದೆ ಎಂದರು.
ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಟ್ಟಿ, ಇತರರಿದ್ದರು.