ಪಟ್ಟಣ ಪಂಚಾಯಿತಿ ಕಾರ್ಯಾಲಯ ಪೀರನವಾಡಿ 
ಬೆಳಗಾವಿ

ದಶಕದಿಂದ ಪಪಂ, ಪುರಸಭೆಗಿಲ್ಲ ಜನಮತ!

ಬೆಳಗಾವಿ : ಜನವಸತಿ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಿ, ಸಮಗ್ರ ಅಭಿವೃದ್ಧಿ ಸಾಧಿಸಲೆಂದು ಜಿಲ್ಲೆಯ ಹಲವು ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿ, ಪುರಸಭೆ ದರ್ಜೆಗೇರಿಸಿ 10 ವರ್ಷಗಳಾದರೂ ಅವುಗಳಿಗೆ ಚುನಾವಣೆ ನಡೆಸಿಲ್ಲ.
ರಾಜ್ಯ ಸರ್ಕಾರ 2016ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 17 ಗ್ರಾಪಂಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಅದರಲ್ಲಿ ಆರು 6 ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮತ್ತು ಒಂದು ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದವು. ಆದರೆ, ವಾರ್ಡ್ ಗಡಿ ಗುರುತಿಸುವುದು, ವಾರ್ಡ್ ಮೀಸಲಾತಿ ಹೀಗೆ ವಿವಿಧ ಕಾರಣಗಳಿಂದ ಈ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರೂ. ಅನುದಾನ ವಾಪಸ್ ಹೋಗಿದೆ. ನೂರಾರು ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಈ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿ, 2020ರಿಂದ ಆಡಳಿತ ಅಧಿಕಾರಿಗಳೇ ಅಭಿವೃದ್ಧಿ ಕೆಲಸಗಳ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆಯುತ್ತಿದ್ದಾರೆ. ಹೀಗಾಗಿ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸಂಗ್ರಹವಾಗುತ್ತಿರುವ ಕೋಟ್ಯಂತರ ರೂ. ತೆರಿಗೆ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕಚೇರಿ ಖರ್ಚು-ವೆಚ್ಚ, ಗುತ್ತಿಗೆ ಸಿಬ್ಬಂದಿ ವೇತನ, ಕಸದ ವಾಹನಕ್ಕೆ ಇಂಧನ, ಚರಂಡಿ ಸ್ವಚ್ಛತೆಗೆ ಹಣ ವ್ಯಯಿಸಲಾಗುತ್ತಿದೆ. ಆದರೆ, ಜನವಸತಿ ಪ್ರದೇಶಗಳಲ್ಲಿ ಹೊಸ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಹತ್ತು ವರ್ಷಗಳಿಂದ ಸರ್ಕಾರದ ನಾಮನಿರ್ದೇಶಿತ ಸದಸ್ಯರು, ಆಡಳಿತಾಧಿಕಾರಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಸರ್ಕಾರ ಚುನಾವಣೆ ನಡೆಸಲು ಕ್ರಮ ವಹಿಸಬೇಕು ಎಂಬ ಆಕ್ರೋಶ ಕೇಳಿಬಂದಿದೆ.
ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾದ ಬಳಿಕ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ರೈತರು, ಕೂಲಿ ಕಾರ್ಮಿಕರು ನರೇಗಾ ಯೋಜನೆಯಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು ಗ್ರಾಮೀಣ ಮೀಸಲು ಸೌಲಭ್ಯದಿಂದ ವಂಚಿತಗೊಂಡಿದ್ದಾರೆ. ಗ್ರಾಪಂಗಳು ಪಪಂಗೆ ಉನ್ನತೀಕರಣಗೊಂಡರೆ ಹೆಚ್ಚಿನ ಅನುದಾನ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ತೆರಿಗೆ ಹೆಚ್ಚಾಗಿದೆ ಹಾಗೂ ಬಡವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯರು ದೂರಿದ್ದಾರೆ.
ಪಟ್ಟಣ ಪಂಚಾಯಿತಿ ಸಿಬ್ಬಂದಿ ಅತಂತ್ರ: ಜಿಲ್ಲೆಯಲ್ಲಿ ಗ್ರಾಪಂಗಳಿಂದ ಮೇಲ್ದರ್ಜೆಗೇರಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ ಕಾಯಂಗೊಳಿಸಲು ಆಡಳಿತ ಮಂಡಳಿ ಠರಾವು ಕಡ್ಡಾಯ. ಆದರೆ, ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಅಂದಾಜು 150 ಪಟ್ಟಣ ಪಂಚಾಯಿತಿ ಸಿಬ್ಬಂದಿ ಅತಂತ್ರರಾಗಿದ್ದಾರೆ. ಗ್ರಾಪಂ ಆಡಳಿತಾವಧಿಯಲ್ಲಿ ಠರಾವು ಮೂಲಕ ನಮ್ಮನ್ನು ಸಿಬ್ಬಂದಿಯಾಗಿ ನೇಮಕ ಮಾಡಿಕೊಂಡಿದ್ದರು. ಆದರೆ, ಮೇಲ್ದರ್ಜೆಗೇರಿದ ಬಳಿಕ ನಮ್ಮನ್ನು ಗುತ್ತಿಗೆ ನೌಕರರನ್ನಾಗಿ ಮುಂದುರಿಸಿಕೊಂಡು ಬರಲಾಗುತ್ತಿದೆ. ಆಡಳಿತಾಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಿಬ್ಬಂದಿ ದೂರಿದ್ದಾರೆ.
"

ಯಾವುದೇ ಸ್ಥಳೀಯ ಸಂಸ್ಥೆಯ ಆಡಳಿತದಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದಾಗ ಮಾತ್ರ ಸರ್ಕಾರದ ಅನುದಾನ ಬಳಕೆಗೆ ಹೊಣೆಗಾರಿಕೆ ಇರುತ್ತದೆ. ಹಾಗಾಗಿ, ಜನಮತ ಕಾಣದ ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಸಬೇಕು.

"

ವಾರ್ಡ್ ಮೀಸಲಾತಿ, ವಾರ್ಡ್ ವಿಂಗಡನೆ ಸಮಸ್ಯೆಗಳಿಂದ ಚುನಾವಣೆ ವಿಳಂಬವಾಗಿರುವುದು ನಿಜ. ಇದೀಗ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.

| ಮಂಜುನಾಥ ಕೋಳಿಗುಡ್ಡ ಬೆಳಗಾವಿ