ಸಿದ್ಧರಾಮೇಶ್ವರ ಸಿ.ಬಿ.ಎಸ್.ಇ. ಶಾಲೆಯನ್ನು ಸೋಮವಾರ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಉದ್ಘಾಟಇಸಿದರು. ಡಾ.ಅಲ್ಲಮಪ್ರಭು ಸ್ವಾಮೀಜಿ, ರಾಜ್ ಹುಲಮನಿ, ಎಸ್.ಪಿ.ಹಿರೇಮಠ ಇತರರಿದ್ದರು. 
ಬೆಳಗಾವಿ

ತಂತ್ರಜ್ಞಾನದ ಕೈಯಲ್ಲಿ ಜಗತ್ತು ಕಿರಿದಾಗುತ್ತಿದೆ

ಬೆಳಗಾವಿ : ಜಗದಗಲ ಮುಗಿಲಗಲವಾಗಿರುವ ಭಗವಂತನ ಸ್ವರೂಪ ಇಷ್ಟಲಿಂಗ ರೂಪದಲ್ಲಿ ಕಿರಿದಾಗಿ ಅಂಗೈಗೆ ಬಂದಿರುವಂತೆಈ ವಿಶಾಲವಾದ ಜಗತ್ತು ಆಧುನಿಕ ತಂತ್ರಜ್ಞಾನದಿಂದಾಗಿ ಕಿರಿದಾಗುತ್ತಿದೆ. ಟ್ಯಾಬ್, ಮೊಬೈಲ್ ಗಳಂತಹ ತಂತ್ರಜ್ಞಾನದಿಂದ ಜಗತ್ತಿನ ಮಾಹಿತಿ ಇಂದು ಅಂಗೈಯಲ್ಲಿ ದೊರೆಯುತ್ತಿದ್ದು, ವಿಶಾಲ ಜಗತ್ತು ಕಿರಿದಾಗುತ್ತಿದೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಶಿವಬಸವ ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಎಸ್.ಜಿ.ಸಂಬರಗಿಮಠ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ನೂತನ ಸಿದ್ಧರಾಮೇಶ್ವರ ಸಿ.ಬಿ.ಎಸ್.ಇ. ಶಾಲೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ತಮ್ಮ ಮಕ್ಕಳನ್ನು ಭವಿಷ್ಯದ ಇಂಜನಿಯರ್ ಹಾಗೂ ವೈದ್ಯರನ್ನಾಗಿಸಬೇಕೆಂಬ ಹಂಬಲ ಎಲ್ಲ ಪಾಲಕರಿಗಿರುತ್ತದೆ. ಆದರೆ, ಮಕ್ಕಳ ಶಿಕ್ಷಣದ ಅಡಿಪಾಯ ಸರಿಯಾಗಿರದೇ ಇರುವುದರಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಪ್ರಾಥಮಿಕ ಹಂತದಿಂದಲೇ ಕಾಳಜಿ ವಹಿಸಬೇಕು ಎಂದು ಆಶೀರ್ವಚನ ನೀಡಿದರು.
ಪೋತದಾರ್ ಅಂತರಾಷ್ಟ್ರೀಯ ಶಾಲೆಯ ಪ್ರಾಚಾರ್ಯ ರಾಜ್ ಹುಲಮನಿ ಮಾತನಾಡಿ, ವಿದ್ಯಾರ್ಥಿಯ ಶೇ.95ರಷ್ಟು ಮೆದುಳಿನ ಬೆಳವಣಿಗೆ ಮೊದಲ ಹತ್ತು ವರ್ಷದೊಳಗೆ ಆಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಬಾಲ್ಯದಲ್ಲಿರುವಾಗ ಉತ್ತಮ ಶಾಲೆಯ ಆಯ್ಕೆ ಬಹಳ ಪ್ರಮುಖ ಎಂದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಪಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ಇತರರಿದ್ದರು.
ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯ ಡಾ.ಸಿ.ಬಿ.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ರಾವ್ ಮತ್ತು ಶಿಲ್ಪಾ ಅಮಟೆ ನಿರೂಪಿಸಿದರು. ಸವಿತಾ ಎಚ್. ವಂದಿಸಿದರು.