ಬೆಳಗಾವಿಯಲ್ಲಿ ಶನಿವಾರ ಜರುಗಿದ ಸಮಾರಂಭದಲಲಿ ವಿಷ್ಣು ಶಿಂದೆ ರಚನೆಯ ಮಣ್ಣಿನ ಮಾಯೆ ಕೃತಿಯನ್ನು ಸತ್ಯಾನಂದ ಪಾತ್ರೋಟ ಬಿಡುಗಡೆಗೊಳಿಸಿದರು. ಲಿಂಗರಾಜ ಸೊಟ್ಟಪ್ಪನವರ, ಸದಾಶಿವ ದೇಶಿಂಗೆ, ಯಪ್ಪಲ್ಲ ಹಿಮ್ಮಡಿ, ಡಾ.ರಾಮಕೃಷ್ಣ ಮರಾಠೆ ಇತರರಿದ್ದರು. ---
ಬೆಳಗಾವಿ: ಇಂದು ಬಹುತೇಕ ಬರಹಗಾರರು ಅವಕಾಶವಾದಕ್ಕೆ ಒಳಗಾಗಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಾಮೀಪ್ಯ ಸಾಧಿಸಿದ್ದಾರೆ. ಇದು ಸರಿಯಲ್ಲ. ಲೇಖಕ ಭ್ರಷ್ಟ್ಟನಾದರೆ ಸಮಾಜವನ್ನು ಅಧಃಪತನಕ್ಕೆ ದೂಡಿದಂತಾಗುತ್ತದೆ ಎಂದು ಹಿರಿಯ ಕವಿ ಸತ್ಯಾನಂದ ಪಾತ್ರೋಟ ಹೇಳಿದರು.
ನಗರದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಭವನದಲ್ಲಿ ಶನಿವಾರ ಜರುಗಿದ ಸಮಾರಂಭದಲ್ಲಿ ವಿಜಯಪುರ ಮಹಿಳಾ ವಿಶ್ವವಿದ್ಯಾಲಯ ಮಂಡ್ಯ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ.ವಿಷ್ಣು ಶಿಂದೆ ರಚನೆಯ ‘ಮಣ್ಣಿನ ಮಾಯೆ’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬರಹಗಾರರ ಜಾತಿ, ಧರ್ಮ, ಲಿಂಗತ್ವ ತಾರತಮ್ಯಗಳ ಮಿತಿಗಳನ್ನು ಮೀರಿ ಮನುಷ್ಯತ್ವದ ಪರವಾಗಿ ಬರೆದು, ಅದೇ ರೀತಿ ಬದುಕಬೇಕು ಎಂದರು.
ಬಸವಣ್ಣ, ಅಂಬೇಡ್ಕರ್ ಕುವೆಂಪುರಂಥವರ ಚಿಂತನೆಗಳು ಲೇಖಕರಿಗೆ ಆದರ್ಶವಾಗಬೇಕು. ಪಂಪ ರಾಜಾಶ್ರಯದಲ್ಲಿದ್ದರೂ ಪ್ರಭುತ್ವ, ಸಾಮಾಜಿಕ, ಧಾರ್ಮಿಕ ಮಿತಿಗಳನ್ನು ದಾಟಿ ಮನುಷ್ಯತ್ವದ ಪರವಾಗಿ ನಿಂತಿರುವುದು ಮಾದರಿಯಾಗಬೇಕು. ಲೇಖಕರು ಇಂದು ಪ್ರಶಸ್ತಿ, ಪ್ರಚಾರಕ್ಕೆ, ಅಧಿಕಾರದ ಲಾಲಸೆಗೆ ಗಂಟು ಬಿದ್ದು, ಅವಕಾಶವಾದದ ಒಳ ಮತ್ತು ಹೊರ ಒಪ್ಪಂದ ಮೂಲಕ ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಬರೆಯುತ್ತಿದ್ದಾರೆ. ಇಂಥವರ ಬರಹ ಸಾಮಾಜಿಕವಾಗಿ ಯಾವುದಕ್ಕೂ ಉಪಯೋಗವಾಗುವುದಿಲ್ಲ ಎಂದು ವಿಶ್ಲೇಷಿಸಿದರು.
ವಿಮರ್ಶಕ ಲಿಂಗರಾಜ ಸೊಟ್ಟಪ್ಪನವರ ಕೃತಿ ಪರಿಚಯಿಸಿದರು. ರಾಯಣ್ಣ ಗೋಗ್ರೀನ್ ಫೌಂಡೇಶನ್ ಅಧ್ಯಕ್ಷ ಸದಾಶಿವ ದೇಶಿಂಗೆ, ಲೇಖಕ ವಿಷ್ಣು ಶಿಂದೆ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ, ಕೃಷ್ಣಾ ಘೋರ್ಪಡೆ, ಡಾ.ಸಿದ್ಧಗಂಗಮ್ಮ, ಡಾ.ರಾಮಕೃಷ್ಣ ಮರಾಠೆ, ಡಾ.ಕೆ.ಎನ್.ದೊಡ್ಡಮನಿ, ಪ್ರೊ.ಮಾರುತಿ ಬುದ್ಯಾಳ, ಪ್ರೊ.ಹೊಸಳ್ಳಿ, ರವಿ ಕೋಟಾರಗಸ್ತಿ, ರಮಾನಾಥ ಬನಶಂಕರಿ ಇತರರಿದ್ದರು.
ಪ್ರೊ.ಶಶಿಕಾಂತ ತಾರದಾಳೆ ಸ್ವಾಗತಿಸಿದರು. ಡಾ.ಜಗನಾಥ ಗೆನೆಣ್ಣವರ ನಿರೂಪಿಸಿದರು.