ಗೋಟೂರ ಗ್ರಾಮದಲ್ಲಿ ಜನರು ದೂರದಿಂದ ತಳ್ಳುಗಾಡಿಯಲ್ಲಿ ನೀರು ತರುತ್ತಿರುವುದು. 
ಬೆಳಗಾವಿ

ನೀರಿಗಾಗಿ ಗೋಟೂರ ಗ್ರಾಮಸ್ಥರ ಅಲೆದಾಟ!

ಪ್ರಮುಖ ಮುಖ್ಯಾಂಶಗಳು

  • ಪೈಪ್ ಒಡೆದು ತೊಂದರೆ
  • ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ
ಸಂಕೇಶ್ವರ: ಗೋಟೂರ ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಜನರು ನೀರಿಗಾಗಿ ಸೈಕಲ್, ಬೈಕ್ ಹಾಗೂ ತಳ್ಳುಗಾಡಿ ಮೂಲಕ ಕಿಲೋಮೀಟರ್ ವರೆಗೂ ಅಲೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
೭ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಗ್ರಾಮಕ್ಕೆ ಹಿಡಕಲ್ಲ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಸರಬರಾಜು ಆಗುತ್ತಿದೆ. ಆದರೆ, ಪೈಪ್‌ಲೈನ್ ಹಳೆಯದಾಗಿರುವುದರಿಂದ ಪೈಪ್ ಪದೇ ಪದೆ ಒಡೆಯುತ್ತಿದ್ದು, ನೀರು ಪೂರೈಕೆ ಅಸ್ತವ್ಯಸ್ತವಾಗುತ್ತಿದೆ.
ದುರಸ್ತಿ ಸಮಸ್ಯೆ: ಹಿಡಕಲ್ಲ ಜಲಾಶಯದಿಂದ ನೀರು ಸರಬರಾಜು ಮಾಡುವ ಈ ಯೋಜನೆ ಜಾರಿಯಲ್ಲಿರುವುದಕ್ಕಿಂತ ಸ್ಥಗಿತಗೊಂಡಿರುವುದೇ ಹೆಚ್ಚು. ಹೀಗಾಗಿ, ನಿರಂತರ ನೀರು ಪೂರೈಕೆ ಇಲ್ಲಿ ಅಪರೂಪ ಎನ್ನುವಂತಾಗಿದೆ. ನೀರಿನ ಸಮಸ್ಯೆಯಿಂದ ಸ್ಥಳೀಯರು ರೋಸಿ ಹೋಗಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬಳಕೆಯಾಗದ ಜಲಮೂಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪರ್ಯಾಯವಾಗಿರುವ ಗ್ರಾಮದಲ್ಲಿನ ಕೊಳವೆ ಬಾವಿಗಳನ್ನೂ ಗ್ರಾಪಂ ಅಧಿಕಾರಿಗಳು ನಿರ್ವಹಣೆ ಮಾಡದೇ ಇರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.