ಬೆಳಗಾವಿಯಲ್ಲಿ ಸೋಮವಾರ ಭಗವಾನ ಮಾಹಾವೀರ ಜಯಂತಿ ಪ್ರಯುಕ್ತ ಜರುಗಿದ ಶೋಭಾಯಾತ್ರೆಯ ದೃಶ್ಯ.
ಬೆಳಗಾವಿ: ನಗರದಲ್ಲಿ ದಿಗಂಬರ ಮತ್ತು ಶ್ವೇತಾಂಬರ ಜೈನ ಸಮುದಾಯದವರು ಕಳೆದ 28 ವರ್ಷಗಳಿಂದ ಒಗ್ಗಟ್ಟಾಗಿ ಮಹಾವೀರ ಜಯಂತಿ ಮಹೋತ್ಸವ ಆಚರಿಸುತ್ತ ಬಂದಿದ್ದು, ಈ ಒಗಟ್ಟು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ನರೇಂದ್ರ ಜೈನ ಬಣ್ಣಿಸಿದರು.
ಜೈನ ಸಮುದಾಯದ ವತಿಯಿಂದ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಪ್ರಯುಕ್ತ ಟಿಳಕವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಶೋಭಾಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾರಂಭದ ಬಳಿಕ ಶೋಭಾಯಾತ್ರೆಯು ಶೇರಿ ಗಲ್ಲಿ, ಶನಿ ಮಂದಿರ, ಎಸ್.ಪಿ.ಎಂ ರಸ್ತೆ, ಕೋರೆ ಗಲ್ಲಿ, ಶಹಾಪುರ, ಬಸವೇಶ್ವರ ವೃತ್ತದ ಮೂಲಕ ಸಂಚರಿಸಿ ಹಿಂದವಾಡಿ ಮಹಾವೀರ ಭವನದಲ್ಲಿ ಸಮಾರೋಪಗೊಂಡಿತು. ಭಗವಾನ ಮಹಾವೀರರ ಸಂದೇಶಗಳ ಜತೆಗೆ ಜಲ, ಭೂಮಿ, ಪ್ರಾಣಿ ಮತ್ತು ಪರಿಸರ ಸಂರಕ್ಷಣೆ ಕುರಿತಾಗಿಯೂ ಜಾಗೃತಿ ಸಂದೇಶದ ರೂಪಕಗಳು ಗಮನ ಸೆಳೆದವು. ಸುಡು ಬಿಸಿಲಲ್ಲೂ ಉತ್ಸಾಹದಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಅಲ್ಲಲ್ಲಿ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮಹಾಪೌರ ಪ್ರೀತಿ ಕಾಮಕರ, ಉಪಮೇಯರ್ ಹನುಮಂತ ಕೊಂಗಾಲಿ, ಸುನಿಲ ಹಣಮನ್ನವರ, ರವಿರಾಜ ಪಾಟೀಲ, ರಾಜೇಂದ್ರ ಜೈನ ಕಟಾರಿಯಾ, ಶಿವನಗೌಡ ಪಾಟೀಲ ಇತರರಿದ್ದರು.