ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಹಾಸ್ಯ ಮಂಜರಿ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಸ್ವಾಮೀಜಿ, ಭರಮಣ್ಣ ಉಪ್ಪಾರ, ಮುಖಂಡ ಅಶೋಕ ಪೂಜಾರಿ ಇತರರಿದ್ದರು.
- ಮುರುಘರಾಜೇಂದ್ರ ಸ್ವಾಮೀಜಿ ಮೆಚ್ಚುಗೆ
- ಗೋಕಾಕ ನಗರದಲ್ಲಿ ಹಾಸ್ಯ ಮಂಜರಿ ಕಾರ್ಯಕ್ರಮ
ಗೋಕಾಕ: ಪತ್ರಕರ್ತರು ಹಾಗೂ ವೈದ್ಯರ ಸಾಮಾಜಿಕ ಕೊಡುಗೆ ಅಪಾರವಾಗಿದೆ ಎಂದು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಮಹಾಲಕ್ಷ್ಮೀ ಸಭಾಭವನದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಹಾಸ್ಯ ಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವೈದ್ಯೋ ನಾರಾಯಣೋ ಹರಿ’ ಎಂಬಂತೆ ವೈದ್ಯರನ್ನು ದೈವ ಸಮಾನ ಕಾಣುವುದು ಭಾರತೀಯ ಪರಂಪರೆಯ ನಂಬಿಕೆಯಾಗಿದೆ. ಜತೆಗೆ ಲೇಖನಿ ಮೂಲಕ ಸಮಾಜ ಜಾಗೃತಗೊಳಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ.
ಗೋಕಾಕ ಇಂದು ಕಲೆ, ಸಂಗೀತ ಹಾಗೂ ಸಾಹಿತ್ಯದಲ್ಲಿ ಪ್ರಸಿದ್ಧಿಯಾಗುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಿವೃತ್ತ ಸೈನಿಕರು, ಪತ್ರಕರ್ತರು ಹಾಗೂ ವೈದ್ಯರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಮಿಮಿಕ್ರಿ ಗೋಫಿ, ಎಸ್. ಪಿ.ಹೊಸಪೇಟೆ, ಜ್ಯೂ.ರಾಜಕುಮಾರ, ಜ್ಯೂ.ವಿಷ್ಣು, ಜ್ಯೂ.ಡಾ.ಪ್ರಭಾಕರ, ಜ್ಯೂ.ರವಿಚಂದ್ರನ್, ಶಿವು ಕೊಟಬಾಗಿ, ದೀಪಾ ಕುಷ್ಟಗಿ ಹಾಗೂ ದಿನ್ನಿ ಮೊರೆ ಹಾಸ್ಯ ರಸಮಂಜರಿ ಕಾರ್ಯಕ್ರಮ ನೀಡಿ ಪ್ರೇಕ್ಷಕರನ್ನು ರಂಜಿಸಿದರು.
ಹಾರೂಗೇರಿ ಹಿಡಕಲ್ ಬಬಲಾದಿ ಮಠದ ಸದಾಶಿವ ಸ್ವಾಮೀಜಿ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಮುಖಂಡ ಅಶೋಕ ಪೂಜಾರಿ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಬಿಇಒ ಜಿ.ಬಿ.ಬಳಗಾರ, ವೈದ್ಯಾಧಿಕಾರಿ ಡಾ.ವೃಷಭೇಂದ್ರ ಹಿರೇಮಠ, ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್‌ಐಗಳಾದ ಕಿರಣ ಮೊಹಿತೆ, ಕೆ.ಬಿ.ವಾಲಿಕಾರ, ವರ್ತಕ ಮಹಾಂತೇಶ ತಾಂವಶಿ, ರಾಮು ಮರೆನ್ನವರ, ಭೀಮಶಿ ಭರಮಣ್ಣವರ, ಮನೋಹರ ಮೆಗೇರಿ, ಶಶಿ ಕಣ್ಣಪ್ಪನವರ, ವೀರೇಂದ್ರ ಪತಕಿ ಇತರರಿದ್ದರು.