ಬೆಳಗಾವಿಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಮತ್ತು ಆಶಾ ಕೋರೆ ದಂಪತಿಯನ್ನು ವಿವಿಧ ಸಂಘಟನೆಗಳಿಂದ ಸನ್ಮಾನಿಸಲಾಯಿತು. ಡಾ.ಪ್ರೀತಿ ದೊಡವಾಡ, ಗಿರೀಶ ಉಪಾಧ್ಯೆ, ಶಿರೀಷ್ ಗೋಗಟೆ, ಅವಿನಾಶ ಪೋತದಾರ ಇತರರಿದ್ದರು.
ಬೆಳಗಾವಿ: ಬೆಳಗಾವಿ ಹೆಸರು ಒಂದು ಕಾಲಕ್ಕೆ ಬೆಂಗಳೂರಿನವರಿಗೂ ಗೊತ್ತಿರಲಿಲ್ಲ. ಆದರೆ, ‘ಬೆಳಗಾವಿ’ ಹೆಸರನ್ನು ಬೆಂಗಳೂರಿಗೆ ಮಾತ್ರವಲ್ಲ ವಿಶ್ವಮಟ್ಟಕ್ಕೆ ಪರಿಚಯಿಸಲು ಪಣತೊಟ್ಟಿದ್ದ ನಾನು ಇದಕ್ಕೆ ಒಂದು ಬ್ರ್ಯಾಂಡ್ ಕಲ್ಪಿಸಿಕೊಟ್ಟಿದ್ದೇನೆಂಬ ಸಾರ್ಥಕ ಭಾವ ನನಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾಹೆರ್ ಕುಲಾಧಿಪತಿ, ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಹೇಳಿದರು.
ಪದ್ಮಶ್ರೀ ಪುರಸ್ಕೃತರಾದ ಹಿನ್ನೆಲೆಯಲ್ಲಿ ಸರೂಪ-ನರ್ತಕಿ ಚಿತ್ರಮಂದಿರದಲ್ಲಿ ಶುಕ್ರವಾರ ಗೋಗಟೆ ಗ್ರೂಪ್, ಬೆಳಗಾವಿ ಸ್ಪೋರ್ಟ್ಸ್ ಕ್ಲಬ್, ಜಿಲ್ಲಾ ಬಾಡಿಬಿಲ್ಡರ್ ಅಸೋಸಿಯೇಷನ್, ಬೆಳಗಾವಿ ಎಜುಕೇಷನ್ ಸೊಸೈಟಿ, ರೋಟರಿ ಪರಿವಾರ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬೆಳಗಾವಿಯನ್ನು ಜಗತ್ತಿಗೆ ತೋರಿಸಿದ್ದು ಪ್ರಭಾಕರ ಕೋರೆ ಎಂದು ಪ್ರಾಮಾಣಿಕವಾಗಿ ನಾನು ಹೇಳಿಕೊಳ್ಳಬಲ್ಲೆ. ಆರು ಪ್ರಧಾನಮಂತ್ರಿಗಳು, ನಾಲ್ಕು ರಾಷ್ಟ್ರಪತಿಗಳನ್ನು ಬೆಳಗಾವಿಗೆ ಕರೆಯಿಸಿದ್ದೇನೆ. ಮೊದಲ ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಇದೆಲ್ಲದರಿಂದ ಬೆಂಗಳೂರು ಬಿಟ್ಟು ಹೊರಬರದ ಹಿರಿಯ ಐಎಎಸ್ ಅಧಿಕಾರಿಗಳು ಬೆಳಗಾವಿ ನೋಡುವಂತಾಯಿತು. ಇಂದು ಬೆಳಗಾವಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇವತ್ತು ಬೆಳಗಾವಿ ಎಲ್ಲಿದೆ ಎಂದು ಯಾರಿಗೂ ಹೇಳುವ ಅಗತ್ಯವಿಲ್ಲ. ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿರುವ ಹೆಮ್ಮೆ ಇದೆ ಎಂದರು.
ಬೆಳಗಾವಿ ಹೆಸರು ಪಸರಿಸುವಲ್ಲಿ ಕೆಎಲ್‌ಇ ಸೊಸೈಟಿ ಸಾಕಷ್ಟು ಪ್ರಯತ್ನ ಮಾಡಿದೆ. ಈಗ ಆಯುರ್ವೇದ, ಹೋಮಿಯೋಪಥಿ ಮತ್ತು ಅಲೋಪಥಿ ಈ ಮೂರರ ಸಂಗಮ ಮಾಡಿ ಚಿಕಿತ್ಸೆ ಕೊಡುತ್ತಿದ್ದೇವೆ. ಆಯುರ್ವೇದದಲ್ಲಿ ಆಧುನಿಕ ಔಷಧ ಉತ್ಪಾದಿಸುತ್ತಿದ್ದೇವೆ. ಮೆಡಿಸಿನ್ ಫಾರ್ಮ್ ಮಾಡಿದ್ದೇವೆ. ಒಂದು ಕಾಲಕ್ಕೆ ಬೆಳಗಾವಿಯಲ್ಲಿ ದೊಡ್ಡ ಆಸ್ಪತ್ರೆ ಇರಲಿಲ್ಲ. ಒಂದೆರಡು ವೈದ್ಯರು ಮನೆಗಳಲ್ಲೇ ಸಣ್ಣಪುಟ್ಟ ಕ್ಲಿನಿಕ್ ನಡೆಸುತ್ತಿದ್ದರು. ಆದರೆ, ಇಂದು ಆರೋಗ್ಯ ಕ್ಷೇತ್ರದಲ್ಲಿ ಬೆಳಗಾವಿ ಪ್ರಮುಖ ಹೆಲ್ತ್ ಹಬ್ ಆಗಿ ಬೆಳೆದಿದೆ.
ಕೆಎಲ್‌ಇಯಲ್ಲಿ ಕಲಿತ ಅನೇಕ ವೈದ್ಯರು ಇವತ್ತು ಗಲ್ಲಿಗಲ್ಲಿಗಳಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ ಎಂದು ಹೇಳಿದರು.
ಮರಾಠ ಲಘು ಪದಾತಿದಳದ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ ಉಪಾಧ್ಯೆ ಮಾತನಾಡಿ, ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗಿನ ಎಲ್ಲರ ಅಗತ್ಯ ಪೂರೈಸುವ ನಗರವಾಗಿ ಬೆಳಗಾವಿ ಅಭಿವೃದ್ಧಿಯಾಗಲು ಡಾ.ಕೋರೆ ಕೊಡುಗೆ ಅಪಾರ. ಎಂಎಲ್‌ಐಆರ್‌ಸಿ ಸೈನಿಕರಿಗೆ ತುರ್ತು ಚಿಕಿತ್ಸೆಗೆ ಕೆಎಲ್‌ಇ ತುಂಬ ಸಹಕಾರಿಯಾಗಿದೆ. ಮೊದಲು ಪುಣೆಯಲ್ಲಿನ ಸೇನಾ ಆಸ್ಪತ್ರೆಗೆ ದೌಡಾಯಿಸಬೇಕಿತ್ತು. ಆದರೆ, ಈಗ ಕೆಎಲ್‌ಇ ಆಸ್ಪತ್ರೆಯಲ್ಲೇ ಕೋರೆಯವರು ಸೈನಿಕರಿಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಸಮಾರಂಭದಲ್ಲಿ ಡಾ.ಪ್ರಭಾಕರ ಕೋರೆ ಮತ್ತು ಆಶಾ ಕೋರೆ ದಂಪತಿಯನ್ನು ಸನ್ಮಾನಿಸಲಾಯಿತು. ಶಿರೀಷ್ ಗೋಗಟೆ, ಅವಿನಾಶ ಪೋತದಾರ, ಡಾ.ಪ್ರೀತಿ ದೊಡವಾಡ, ಕರ್ನಲ್ ವಿನೋದ ಪಾಟೀಲ ಇತರರಿದ್ದರು.
ಕೃಷಿ ಪ್ರವಾಸೋದ್ಯಮಕ್ಕೆ ಒತ್ತು
ಕೃಷಿ ಮತ್ತು ರೈತರು ನನ್ನ ಅತ್ಯಂತ ಪ್ರೀತಿಯ ವಿಷಯ. ಇದಕ್ಕಾಗಿಯೇ ಕೃಷಿ ವಿಜ್ಞಾನ ಕೇಂದ್ರ ಮಾಡಿದ್ದೇವೆ. ಇವತ್ತು ಎಐ ಆಧಾರಿತ ಕೃಷಿ ತಂತ್ರಜ್ಞಾನ ಬಳಕೆ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದ್ದೇವೆ. ಕೃಷಿ ಕಾಲೇಜ್ ಸಹ ಆರಂಭಿಸಿದ್ದೇವೆ. ಇದರ ಮುಂದುವರಿದ ಭಾಗವಾಗಿ ಅಗ್ರೋ ಟೂರಿಸಂ ಆರಂಭಿಸಲಿದ್ದೇವೆ. ಹಳ್ಳಿಯ ಊಟ, ಹಳ್ಳಿ ಅಡುಗೆ ಮಾಡುವ ಪದ್ಧತಿ, ಜೀವನ ಶೈಲಿ ಎಲ್ಲವನ್ನೂ ಕಲಿಸಲಿದ್ದೇವೆ. ಈ ಮೂಲಕ ಗ್ರಾಮೀಣ ಭಾಗದ ಕೃಷಿ ಬದುಕಿನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಡಾ.ಪ್ರಭಾಕರ ಕೋರೆ ಹೇಳಿದರು.
ಸಮಾಜದ ಹೆಮ್ಮೆ
ಮನುಷ್ಯರು ಪ್ರತಿದಿನ ಹುಟ್ಟುತ್ತಾರೆ. ಆದರೆ, ಮಾನವೀಯತೆ ಕೇವಲ ಅಪರೂಪಕ್ಕೊಮ್ಮೆ ಮಾತ್ರ ಹುಟ್ಟುತ್ತದೆ. ಹಾಗೆ ಈ ಶತಮಾನಕ್ಕೆ ಸಿಕ್ಕಿರುವ ಅಪರೂಪದ ವ್ಯಕ್ತಿತ್ವ ಡಾ.ಪ್ರಭಾಕರ ಕೋರೆ. ಕೆಎಲ್‌ಇ ಸೊಸೈಟಿಗೆ ಮಾತ್ರವಲ್ಲ, ನಮ್ಮ ಇಡೀ ಬೆಳಗಾವಿ ಜಿಲ್ಲೆಗೆ ಹೆಮ್ಮೆಯ ವ್ಯಕ್ತಿ. ಹಲವು ವರ್ಷಗಳ ಕಾಲ ಒಂದೇ ಸ್ಥಾನದಲ್ಲಿ ಮುಂದುವರಿಯುವುದು ತುಂಬಾ ಕಷ್ಟ. ಆದರೆ, ಜನರ ಆಶಯದಿಂದ ಅವರು ಇಷ್ಟು ವರ್ಷಗಳ ಕಾಲ ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷರಾಗಿ ಒಂದು ಸಂಸ್ಥೆಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ಅವಿನಾಶ ಪೋತದಾರ ಶ್ಲಾಘಿಸಿದರು.
26ಕ್ಕೆ ಹುಬ್ಬಳ್ಳಿ ಆಸ್ಪತ್ರೆ ಉದ್ಘಾಟನೆ
ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸೊಸೈಟಿಯಿಂದ ನೂತನವಾಗಿ ನಿರ್ಮಿಸಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಜು.26ರಂದು ಉದ್ಘಾಟನೆಯಾಗಲಿದೆ. ಇಡೀ ಕ್ಯಾಂಪಸ್ ಎಐ ಆಧಾರಿತ ತಂತ್ರಜ್ಞಾನ ಹೊಂದಿದೆ. ಎಲ್ಲವೂ ಅತ್ಯಾಧುನಿಕವಾಗಿದೆ. ಪಕ್ಕದಲ್ಲೇ ನಾಲೆ ಹರಿದು ಹೋಗಿದ್ದರೂ ಅದನ್ನೂ ಸುಂದರಗೊಳಿಸಿ ಸುತ್ತಲೂ ಹಸಿರು ಕಾಣುವಂತೆ ಉದ್ಯಾನ ಮಾಡಿದ್ದೇವೆ. ಹುಬ್ಬಳ್ಳಿಗೆ ಬಂದವರೆಲ್ಲ ಅವಶ್ಯಕವಾಗಿ ಭೇಟಿ ನೀಡಲೇಬೇಕು ಎನ್ನುವಷ್ಟರ ಮಟ್ಟಿಗೆ ಆಕರ್ಷಕವಾಗಿ ನಿರ್ಮಿಸಿದ್ದೇವೆ ಎಂದು ಡಾ.ಕೋರೆ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ಕೋರೆ ದಂಪತಿಯನ್ನು ವೇದಘೋಷಗಳ ಮಂತ್ರದೊಂದಿಗೆ ಶಾಸ್ತ್ರೋಕ್ತವಾಗಿ ಸಮಾರಂಭಕ್ಕೆ ಬರಮಾಡಿಕೊಂಡಿರುವುದು ವಿಶೇಷವಾಗಿ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಪುರೋಹಿತರು, ಡಾ.ಕೋರೆಯವರು ಆಯುರಾರೋಗ್ಯದಿಂದ ಶತಾಯುಷಿಗಳಾಗಿ ಎಂದು ದೇವರಲ್ಲಿ ಪ್ರಾರ್ಥಿಸಿ ಪುಷ್ಪವೃಷ್ಟಿಗೈದು ಆಶೀರ್ವದಿಸಿದರು.