ಮುಗಳಿ ಗ್ರಾಮದಲ್ಲಿ ಮಾಜಿ ಹಾಗೂ ಹಾಲಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ಶಿವಬಸವ ಸ್ವಾಮೀಜಿ, ಮಹೇಶ ಭಾತೆ, ವೀರೇಶ ಪಾಟೀಲ, ಸತ್ಯಪ್ಪ ಕೊಟಬಾಗಿ, ಜಗದೀಶ ಪೂಜೇರಿ ಇತರರಿದ್ದರು.
ಚಿಕ್ಕೋಡಿ: ಅನ್ನ ನೀಡುವ ರೈತ ಮತ್ತು ಗಡಿ ಕಾಯುವ ಸೈನಿಕರು ಇಬ್ಬರೂ ದೇಶದ ಬಹುದೊಡ್ಡ ಆಸ್ತಿ. ಸಮಾಜದ ಹೊಸತನ ಹಾಗೂ ಧನಾತ್ಮಕ ಬದಲಾವಣೆಗಳಿಗೆ ಮಾಜಿ ಸೈನಿಕರ ಸಂಘಟನೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹುಕ್ಕೇರಿ ವಿರಕ್ತ ಮಠದ ಶಿವಬಸವ ಸ್ವಾಮೀಜಿ ಹೇಳಿದರು. ತಾಲೂಕಿನ ಮುಗಳಿ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಹಾಗೂ ಹಾಲಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ದೇಶದ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರ ಪಾತ್ರ ಅತ್ಯಂತ ಅಮೂಲ್ಯವಾದುದು. ಚಳಿ, ಬಿಸಿಲು ಲೆಕ್ಕಿಸದೆ ಗಡಿ ಕಾಯುವ ಅವರ ದಕ್ಷತೆಯಿಂದ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಸೈನಿಕರ ನಿಸ್ವಾರ್ಥ ಸೇವೆ ಹಾಗೂ ದೇಶಭಕ್ತಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದರು.
ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ದೇಶ ಸೇವೆಗಾಗಿ ಜೀವನ ಮುಡಿಪಾಗಿಟ್ಟ ಸೈನಿಕರ ತ್ಯಾಗದ ಜತೆಗೆ ಕುಟುಂಬ ಸದಸ್ಯರನ್ನು ದೇಶಕ್ಕೆ ಸಮರ್ಪಿಸಿ ಜೀವನ ನಿರ್ವಹಿಸುತ್ತಿರುವ ತಂದೆ-ತಾಯಿ, ಹೆಂಡತಿ ಮತ್ತು ಮಕ್ಕಳು ದೇಶ ಸೇವಕರೆ ಆಗಿದ್ದಾರೆ ಎಂದು ತಿಳಿಸಿದರು.
ಚಿಂತಕ ವೀರೇಶ ಪಾಟೀಲ, ಸಂಘದ ಅಧ್ಯಕ್ಷ ಸತ್ಯಪ್ಪ ಕೊಟಬಾಗಿ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಗದೀಶ ಪೂಜೇರಿ, ಭಾರತಿ ಶಿಂಧೆ, ಮಲ್ಲಪ್ಪ ಕೊಟಬಾಗಿ, ರಾಜು ಹರಗನ್ನವರ, ಈರಗೌಡ ಪಾಟೀಲ, ಶಿವಪ್ಪ ಬಂಬಲವಾಡಿ, ಬಿ.ಎಲ್.ಕಳಸನ್ನವರ ಇತರರಿದ್ದರು.