ಸವದತ್ತಿ ಗ್ರಾಮದೇವಿ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸೋಮವಾರ ಸನ್ಮಾನಿಸಲಾಯಿತು. ವಿಶ್ವಾಸ ವೈದ್ಯ, ವಿರೂಪಾಕ್ಷ ಮಾಮನಿ, ಅಲ್ಲಮಪ್ರಭು ಪ್ರಭುನವರ, ಚಂದ್ರು ಶಾಮರಾಯನವರ ಇತರರಿದ್ದರು.
ಸವದತ್ತಿ: ಗ್ರಾಮದೇವಿ ಜಾತ್ರಾ ಮಹೋತ್ಸವದ ಆರನೇ ದಿನ ಶನಿವಾರ ನಗರದಲ್ಲಿ ಧಾರ್ಮಿಕ ವಿಧಿವಿಧಾನಗಳು, ಉಡಿ ತುಂಬುವ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆ ಸಂಭ್ರಮದಿಂದ ಜರುಗಿದವು.
ವೈಶಾಖ ಕೃಷ್ಣ ಸಪ್ತಮಿ ನಿಮಿತ್ತ ಬೆಳಗ್ಗೆ ಮಹಾಗಣಪತಿ ಪೂಜೆ ಹಾಗೂ ಶೈಲಪುತ್ರಿ, ಬ್ರಹ್ಮಚಾರಿಣಿ ಹೋಮ, ವೈದಿಕ ಮಂತ್ರೋಚ್ಚಾರಗಳೊಂದಿಗೆ ನೆರವೇರಿದವು.
ಈ ವೇಳೆ ಮಾತನಾಡಿದ ಜಾತ್ರೆಯ ಋತ್ವಿಜರು, ಹೋಮ ಹಾಗೂ ಪೂಜೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲು, ಭಕ್ತರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಜ್ಞಾನ ಹಾಗೂ ಸಮೃದ್ಧಿ ವೃದ್ಧಿಯಾಗಲೆಂಬ ಉದ್ದೇಶದಿಂದ ನಡೆಸಲಾಗುತ್ತಿದೆ ಎಂದರು.
ಭಕ್ತರು ಬೆಳಗ್ಗೆಯಿಂದ ಡೊಳ್ಳು, ತಾಶಾ ಹಾಗೂ ವಾದ್ಯಮೇಳಗಳೊಂದಿಗೆ ಸರತಿಯಲ್ಲಿ ಆಗಮಿಸಿ ದೇವಿ ದರ್ಶನ ಪಡೆದು ಉಡಿ ತುಂಬಿದರು. ಬಜಾರ್ ರಸ್ತೆ, ಉಪ್ಪಾಸಗೇರಿ ಓಣಿ, ಹೆಡ್ ಪೋಸ್ಟ್ ಆಫೀಸ್ ಭಾಗ, ಕವಲಪೇಟ, ಹಂಪಣ್ಣವರ ಓಣಿ, ಬಸ್ತಿ ಓಣಿ, ಬಳಗಾರ ಓಣಿ, ಪತ್ತಾರ ಓಣಿ, ಸಾಲೋಣಿ ಓಣಿ, ಬಿಕ್ಕಣ್ಣವರ ಓಣಿ, ದಿವಟಗೇರಿ, ಪದಕಿಪುರಂ, ಕೆಂಚಲಾರಕೊಪ್ಪ ಹಾಗೂ ಸೌಗಂಧಿಪುರ ಓಣಿಗಳಿಂದ ಆಗಮಿಸಿದ್ದ ಭಕ್ತರಿಂದ ನಗರ ಸಂಪೂರ್ಣ ಭಕ್ತಿ ವಾತಾವರಣದಿಂದ ಕಂಗೊಳಿಸಿತು.
ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಬಣ್ಣಬಣ್ಣದ ರಂಗೋಲಿ ಬಿಡಿಸಿ ಗಮನ ಸೆಳೆದರು. ಇದೇ ವೇಳೆ ತೆರಿ ಬಂಡಿ ಚಕ್ಕಡಿ ಸ್ಪರ್ಧೆ ಜರುಗಿತು.