ಬೆಳಗಾವಿ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಆಸೀಫ್ ಸೇಠ್, ರಾಹುಲ ಶಿಂಧೆ ಇತರರಿದ್ದರು. 
ಬೆಳಗಾವಿ

ಬಡವರಿಗೆ ಬುದ್ಧ ಬಸವ ಅಂಬೇಡ್ಕರ್ ನಿವೇಶನ ಭಾಗ್ಯ

ಬೆಳಗಾವಿ:ಪ್ರಪ್ರಥಮ ಬಾರಿಗೆ ರಾಜ್ಯದ ಪರಿಶಿಷ್ಟ ಜಾತಿ,ಪಂಗಡಗಳ ಜನರಿಗೆ ಸಕಲ ಮೂಲಸೌಕರ್ಯ ಹೊಂದಿರುವ ಬಡಾವಣೆ ಅಭಿವೃದ್ಧಿಪಡಿಸಿ ನೀವೇಶನ ಹಂಚಿಕೆ ಮಾಡಲು ಬುದ್ಧ, ಬಸವ, ಅಂಬೇಡ್ಕರ್ ನಿವೇಶನ ಹಂಚಿಕೆ ಯೋಜನೆ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದ ಡಾ.ಅಂಬೇಡ್ಕರ್ ಉದ್ಯಾನದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಸತನಾಡಿದ ಅವರು,20 ವರ್ಷಗಳಿಂದ ಎಸ್.ಸಿ,ಎಸ್. ಟಿ ಸಮುದಾಯದವರಿಗೆ ನಿವೇಶನ ಮಂಜೂರು ಮಾಡಲಾಗುತ್ತಿದೆ. ಆದರೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುತ್ತಿರಲಿಲ್ಲ.
ಹಾಗಾಗಿ ರಸ್ತೆ, ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಸಕಲ ಮೂಲಸೌಕರ್ಯ ಹೊಂದಿರುವ ಬಡಾವಣೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಪಡಿಸುವಂತಹ ಯೋಜನೆಯನ್ನು ದೇಶದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಈಗಾಗಲೇ ಎಸ್.ಸಿ.ಪಿ,ಟಿ.ಎಸ್.ಪಿ ಯೋಜನೆಯಿಂದ ಸುಮಾರು 20 ಕೋಟಿ ಅನುದಾನ ಬಳಕೆ ಮಾಡಿಕೊಂಡು ಬುದ್ಧ ಬಸವ ಅಂಬೇಡ್ಕರ್ ನಿವೇಶನ ಹಂಚಿಕೆ ಯೋಜನೆ ಖಾಸಗಿ ಮಾದರಿಯಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುವುದು.ಫಲಾನುಭವಿಗಳ ಆಯ್ಕೆ ಮತ್ತು ನಿವೇಶನ ಹಂಚಿಕೆಯು ಸದ್ಯಕ್ಕೆ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಆಯಾ ಗ್ರಾಮ ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳು ನಡೆಸಲಿದ್ದು, ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿದ ಜಾಗದಲ್ಲಿ ಕೇವಲ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಸಂಬಂಧಿಸಿದ ಪಂಚಾಯತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಿದೆ.ಫಲಾನುಭವಿಗಳ ಆಯ್ಕೆ ಅಥವಾ ಹಂಚಿಕೆಯಲ್ಲಿ ಲೋಕೋಪಯೋಗಿ ಇಲಾಖೆಯ ಪಾತ್ರವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಆಸೀಫ್ ಸೇಠ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ ಪಿ ಕೆ.ರಾಮರಾಜನ್ ಇತರರಿದ್ದರು.
.....
ಬಾಕ್ಸ್
ಒಂದು ಸಾವಿರ ಎಕರೆ ಅಭಿವೃದ್ಧಿ
ರಾಜ್ಯದಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಸುಮಾರು 42 ಎಕರೆಯಲ್ಲಿ ಮೈಸೂರು, ಬೆಳಗಾವಿ ಜಿಲ್ಲೆಯ ಪಾಶ್ಚಾಪುರ ಗ್ರಾಮ ಪಂಚಾಯಿತಿಯ ಗುಮಚನಮರಡಿ; ಹುಕ್ಕೇರಿ ತಾಲೂಕಿನ ಹರಗಾಪುರ; ಮೂಡಲಗಿ ತಾಲೂಕಿನ ಅರಬಾವಿ, ಸವದತ್ತಿ; ಬಳ್ಳಾರಿ ಜಿಲ್ಲೆಯ ಕುರುಗೋಡು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಕ್ಕಹಳ್ಳಿಯಲ್ಲಿ ಬಡಾವಣೆ ನಿರ್ಮಾಣದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಎಂದು ಸಚಿವ ಜಸರಕಿಹೊಳಿ ತಿಳಿಸಿದರು.
....
ಬಾಕ್ಸ
90ದಿನದಲ್ಲಿ ಬಡಾವಣೆ ನಿರ್ಮಾಣ
ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಒಟ್ಟು 90 ದಿನದಲ್ಲಿ ಬಡಾವಣೆ ನಿರ್ಮಾಣಗೊಂಡು ಹಂಚಿಕೆ ಮಾಡಲಾಗುವುದು ಎಂದು ಸಚಿವ ಜಾರಕಿಹೊಳ್ಿ ವಿವರಿಸಿದರು.