ಸಂಕೇಶ್ವರದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಸಿ, ಎಸ್‌ಟಿ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಸಿಪಿಐ ಗಣಪತಿ ಕೊಂಗನೊಳ್ಳಿ ಮಾತನಾಡಿದರು. ನಂದಿನಿ ಕಳಶೆಟ್ಟಿ, ಪ್ರಮೋದ ಹೊಸಮನಿ, ವಿನೋದ ನಾಯಕ ಇತರರಿದ್ದರು.
- ಎಸ್‌ಸಿ , ಎಸ್‌ಟಿ ಮುಖಂಡರ ಒತ್ತಾಯ
- ಕುಂದುಕೊರತೆ ನಿವಾರಣೆ ಸಭೆ
ಸಂಕೇಶ್ವರ: ಅನಧಿಕೃತ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು ಮತ್ತು ಠಾಣೆಗೆ ಬರುವ ದೂರುಗಳ ವಿಚಾರದಲ್ಲಿ ತಾರತಮ್ಯ ಎಸಗದೆ ಸಮಾನವಾಗಿ ಸ್ಪಂದಿಸಬೇಕು ಎಂದು ಎಸ್‌ಸಿ, ಎಸ್‌ಟಿ ಮುಖಂಡರು ಒತ್ತಾಯಿಸಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್‌ಸಿ, ಎಸ್‌ಟಿ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಮಾತನಾಡಿದ ಮುಖಂಡರು, ಠಾಣೆಗೆ ಬರುವ ಸಾರ್ವಜನಿಕ ದೂರು ಸ್ವೀಕರಿಸುವಾಗ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಪರಿಶಿಷ್ಟ ಸಮುದಾಯಕ್ಕೆ ಸೇರಿದ ದೂರುಗಳ ವಿಷಯದಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಾಗುತ್ತಿದ್ದರೆ, ಇತರ ಕೆಲವು ಸಮುದಾಯಗಳ ಪ್ರಕರಣಗಳಲ್ಲಿ ಇಂತಹ ತ್ವರಿತ ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿ ಪ್ರಕರಣದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಹಾಗೂ ವಿವಿಧ ಸಮಸ್ಯೆ ಪರಿಹರಿಸಲು ಸಭೆಯಲ್ಲಿ ಆಗ್ರಹಿಸಿದರು.
ಮುಖಂಡರ ಅಹವಾಲು ಆಲಿಸಿದ ಸಿಪಿಐ ಗಣಪತಿ ಕೊಂಗನೊಳ್ಳಿ ಮಾತನಾಡಿ, ಅಕ್ರಮ ಬಡ್ಡಿ ದಂಧೆ ವಿರುದ್ಧ ಕಠಿಣ ನಿಗಾ ಇಡಲಾಗುವುದು. ಸಂಚಾರ ದಟ್ಟಣೆ, ಪಾರ್ಕಿಗ್ ಮತ್ತು ದೂರುಗಳ ವಿಲೇವಾರಿ ಸೇರಿದಂತೆ ಪ್ರತಿಯೊಂದು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರೊಬೇಷನರಿ ಪಿಎಸ್‌ಐ ನಂದಿನಿ ಕಳಶೆಟ್ಟಿ, ಪ್ರಮೋದ ಹೊಸಮನಿ, ವಿನೋದ ನಾಯಕ, ಪ್ರಕಾಶ ಮೈಲಾಕೆ, ಗಂಗಾರಾಮ ಭೂಸಗೋಳ, ಪ್ರಕಾಶ ಭೂಸಗೋಳ, ಶಿವಾನಂದ ಸಮ್ಮಕ್ಕನವರ, ಆಕಾಶ ಕೇರಿಮನಿ, ಪ್ರಕಾಶ ಇಟೇಕರ್, ಉದಯಕುಮಾರ ಕರನಿಂಗ, ಹನುಮಂತ ಶೇಖನವರ ಇತರರಿದ್ದರು.