ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜನ್ಮದಿನದ ನಿಮಿತ್ತ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ ಅವರಿಗೆ ನಿಜಗುಣಾನಂದ ಸ್ವಾಮೀಜಿ ಆಶೀರ್ವದಿಸಿದರು. ಸಂಗನಗೌಡ ಪಾಟೀಲ, ಶಂಕರ ಹೊಳಿ, ಮುದುಕಪ್ಪ ಮರಡಿ ಇತರರಿದ್ದರು.
ಚನ್ನಮ್ಮನ ಕಿತ್ತೂರು:
ಎಂ.ಕೆ.ಹುಬ್ಬಳ್ಳಿ ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತಿದೆ. ನೀವೆಲ್ಲ ಭರವಸೆ ಇಟ್ಟು ಅವಕಾಶ ನೀಡಿದ್ದೀರಿ. ನೀಮ್ಮ ಮತಕ್ಕೆ ಬೆಲೆ ತರುವಂತೆ ಮೂರು ವರ್ಷ ಪ್ರಾಮಾಣಿಕ ಸೇವೆ ಮಾಡಿದ ತೃಪ್ತಿ ನನಗಿದೆ ಎಂದರು.
ಸ್ವಾತಂತ್ರ್ಯ ಹೋರಾಟಕ್ಕೆ ಕಿಡಿ ಹೊತ್ತಿಸಿದ ಕಿತ್ತೂರು ನಾಡಿನ ಅಭಿವೃದ್ಧಿ ಮುಖ್ಯವಾಗಿದೆ. ಮಾಸ್ಟರ್ ಪ್ಲ್ಯಾನ್, ರಾಣಿ ಚನ್ನಮ್ಮನ ಕೋಟೆಯಲ್ಲಿಯ ಸ್ಮಾರಕಗಳ ಅಭಿವೃದ್ಧಿ ನನ್ನ ಆದ್ಯತೆಯಾಗಿದೆ. ಶಾಸಕನಾದ ಮೇಲೆ ಕಿತ್ತೂರಿನಲ್ಲಿ ನಿರ್ಮಿಸಲು ಯೋಜಿಸಿದ್ದ 50 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಏರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯ ಮುಜರಾಯಿ ಇಲಾಖೆ ನಿರ್ದೇಶಕ ಡಾ.ಮಹಾಂತೇಶ ಆರಾದ್ರಿಮಠ ಮಾತನಾಡಿ, ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಆಗದೇ ಇರುವ ಕೆಲಸವನ್ನು ಶಾಸಕ ಬಾಬಾಸಾಹೇಬ ಪಾಟೀಲ ಕೇವಲ ಮೂರು ವರ್ಷಗಳಲ್ಲಿ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮತ ಕೇಳಲು ಬರುವುದೇ ಬೇಡ. ಅವರ ಅಭಿವೃದ್ಧಿ ಕೆಲಸಗಳೇ ಅವರನ್ನು ಗೆಲ್ಲಿಸಿಕೊಂಡು ಬರಲಿವೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ ಮಾತನಾಡಿ,ಬಾಬಾಸಾಹೇಬ ಪಾಟೀಲ ಜತೆಗೆ ನನಗೂ ಕೂಡ ಜನರು ಅವಕಾಶ ನೀಡಿದ್ದೀರಿ. ನಿಷ್ಠೆಯಿಂದ ನಿಮ್ಮೆಲ್ಲರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಶಂಕರ ಹೊಳಿ, ತಾಪಂ ಮಾಜಿ ಸದಸ್ಯ ಮುದುಕಪ್ಪ ಮರಡಿ, ಪಪಂ ಅಧ್ಯಕ್ಷ ಜೈಸಿದ್ಧರಾಮ ಮಾರಿಹಾಳ, ತಹಸೀಲ್ದಾರ್ ಕಲಗೌಡ ಪಾಟೀಲ, ಅಷ್ಪಾಕ್ ಹವಾಲ್ದಾರ, ಮಠಾಧೀಶರು, ಪಪಂ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.