ಅಥಣಿಗೆ ಆಗಮಿಸಿದ ಸಚಿವ ಲಕ್ಷ್ಮಣ ಸವದಿ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
- ಸವದಿ ಅನಿಸಿಕೆ
- ಅದ್ದೂರಿ ಸ್ವಾಗತ
ಅಥಣಿ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಬಾರಿ ನಗರಕ್ಕೆ ಆಗಮಿಸಿದ ಸಚಿವ ಲಕ್ಷ್ಮಣ ಸವದಿ ಅವರನ್ನು ಶನಿವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಶಿವಯೋಗಿ ವೃತ್ತ, ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಹೂ, ಮಾಲೆ, ಗುಲಾಲ, ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು ಜಯಘೋಷ ಕೂಗಿದರು.
ನಗರದ ಸಿದ್ಧೇಶ್ವರ ದೇವಾಲಯ, ಗಣೇಶ ಮಂದಿರ, ರಾಯರಮಠ ನಂತರ ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆ ದರ್ಶನ ಪಡೆದ ಸಚಿವ ಸವದಿ, ಗಚ್ಚಿನಮಠದ ಶಿವಬಸವ ಸ್ವಾಮೀಜಿ ಆರ್ಶೀವಾದ ಪಡೆದರು.
ಈ ವೇಳೆ ಲಕ್ಷ್ಮಣ ಸವದಿ ಮಾತನಾಡಿ, ಕ್ಷೇತ್ರದ ಜನರ ಋಣ ತೀರಿಸುವ ಕಾರ್ಯ ನನ್ನ ಮೇಲಿದ್ದು, ಗೆಲುವಿನಿಂದ ಹಿಡಿದು ಇಲ್ಲಿಯವರೆಗೆ ಬೆಂಬಲ ನೀಡುತ್ತ, ಈಗ ಸಚಿವ ಸ್ಥಾನ ದೊರೆಯಲು ಜನರ ಆರ್ಶೀವಾದವೇ ಕಾರಣ. ಹೀಗಾಗಿ ಅಥಣಿ ಸಮಗ್ರ ಅಭಿವೃದ್ಧಿ ಜತೆಗೆ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಮಾಡುವೆ. ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚಾಲನೆ ನೀಡಿ ನೀರಾವರಿ, ರಸ್ತೆ, ವಿದ್ಯುತ್, ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಇನ್ನಷ್ಟು ಬಲಪಡಿಸಿ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಸಚಿವ ಸ್ಥಾನ ನೀಡಿರುವ ಪಕ್ಷದ ವರಿಷ್ಠರ ಗೌರವ ಹೆಚ್ಚಿಸುವ ಕಾರ್ಯ ಮಾಡುತ್ತೇನೆ ಎಂದರು.
ಪಕ್ಷದ ಸಂಘಟನೆ ಜತೆಗೆ ಅನೇಕ ಜಿಲ್ಲೆಗಳಲ್ಲಿ ಸುತ್ತಾಡಿ ೨೦೨೮ಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಅನ್ಯತಾ ಭಾವಿಸದೆ ಹಗಲು-ರಾತ್ರಿ ದುಡಿದು ನಿಮ್ಮ ಋಣದ ಭಾರ ಕಡಿಮೆ ಮಾಡಿಕೊಳ್ಳುವೆ ಎಂದರು.
ವಾರದ ೫ ದಿನ ರಾಜ್ಯದಲ್ಲೆಡೆ ಸಂಚರಿಸಿ ಎರಡು ದಿನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಮಸ್ಯೆ ಇದ್ದಾಗ ನನಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸುತ್ತೇನೆ ಎಂದು ಅಭಯ ನೀಡಿದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ನಮ್ಮತಂದೆಯವರಿಗೆ ಸಚಿವ ಸ್ಥಾನ ಲಭಿಸಿರುವುದು ಕ್ಷೇತ್ರದ ಜನರಿಗೆ ಸಂತಸ ತಂದಿದೆ. ಇನ್ನಷ್ಟು ಅಭಿವೃದ್ಧಿ ಕೈಗೊಳ್ಳುವ ಮೂಲಕ ಅಥಣಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಶಿವಾನಂದ ದಿವಾನಮಳ, ನಾನಾಸಾಬ ಗೋಟಖಿಂಡಿ, ಮಹಾದೇವ ಹೊನ್ನಳಿ, ಈರಣಗೌಡ ಪಾಟೀಲ, ಶಿವು ಗುಡ್ಡಾಪುರ, ಸಂತೋಷ ಸಾವಡಕರ, ಬಸಪ್ಪ ತೇಲಿ, ರಮೇಶ ಬುರುಡ, ದತ್ತಾ ವಾಸ್ಟರ, ಶಂಕರ ನಂದೇಶ್ವರ, ಚೇತನ ದಳವಾಯಿ, ಈರಣ್ಣ ಅಡಗಲ್ಲ, ಈರಯ್ಯ ಮೂಲಿಮಠ, ಬಸವರಾಜ ಬಿಳ್ಳೂರ ಇತರರಿದ್ದರು.