ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಅಥಣಿ ಗಚ್ಚಿನಮಠದ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಶಿವಯೋಗಿಗಳ ಬದುಕು ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿನುಡಿ
  • ಜಯಂತ್ಯುತ್ಸವ
ಅಥಣಿ: ಶಿವಯೋಗ ಎಂಬುದು ತಪಸ್ಸು ಅದನ್ನು ಸಾಧನೆ ಮಾಡಿದವರಿಗೆ ಮಾತ್ರ ಶಿವಯೋಗಿ ಎನ್ನುತಾರೆ. ಅದನ್ನು ಅಥಣಿ ಗಚ್ಚಿನಮಠದ ಕು ದಾರಿದೀಪ ಮುರುಘೇಂದ್ರ ಶಿವಯೋಗಿಗಳು ಸಾಧಿಸಿ ಶಿವಯೋಗದ ಮಹತ್ವ ತಿಳಿಸಿ ಎಲ್ಲರಿಗೂ ಬೆಳಕಾಗಿದ್ದಾರೆ ಎಂದು ಮೈಸೂರು ವೀರಸಿಂಹಾಸನ ಮಹಾಸಂಸ್ಥಾನಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಹಂಪಿನಗರದ ಚಂದ್ರಶೇಖರ ಆಜಾದ್ ವೇದಿಕೆಯಲ್ಲಿ ರಾಷ್ಟ್ರೀಯ ಬಸವತತ್ತ್ವ ಪರಿಷತ್ ಮತ್ತು ಅಥಣಿ ಗಚ್ಚಿನಮಠದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮುರುಘೇಂದ್ರ ಶಿವಯೋಗಿಗಳ ಜಯಂತ್ಯುತ್ಸವ ಮತ್ತು ಬಸವೋತ್ಸವ ಕಾರ್ಯಕ್ರಮದಲ್ಲಿ ಶಿವಯೋಗಿಗಳ ಕುರಿತು ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಬಸವಣ್ಣನ ತತ್ತ್ವ ಸಂದೇಶ ಜೀವನದುದ್ದಕ್ಕೂ ಅರಿತು ಆಚರಿಸಿದವರು. ಶಿವಯೋಗ, ಕಾಯಕ, ದಾಸೋಹ, ಸಮಾನತೆ ಆಚರಣೆಗೆ ತಂದು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದವರು. ಗಿಡ, ಮರ, ಪಕ್ಷಿ, ಪ್ರಾಣಿಗಳನ್ನು ಪ್ರೀತಿಸಿದವರು. ನಾಡಿನಲ್ಲಿ ಬಸವತತ್ತ್ವ ಪ್ರಸಾರಕ್ಕೆ ಬುನಾದಿ ಹಾಕಿದವರು. ಮುರುಘೇಂದ್ರ ಶಿವಯೋಗಿಗಳು ಕಾವಿಕುಲಕ್ಕೆ ಘನತೆ ತಂದುಕೊಟ್ಟ ಮಹಾತಪಸ್ವಿಗಳ ಕಾರ್ಯಕ್ರಮ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದರಿಂದ ಇಲ್ಲಿಯ ಭಕ್ತರಿಗೆ ಅವರ ಆಶೀರ್ವಾದ ಲಭಿಸಲಿ. ಇಂತಹ ಮಹಾತ್ಮರ ಬದುಕು ಎಲ್ಲರಿಗೂ ದಾರಿದೀಪವಾಗಲಿ ಎಂದರು.
ಭೋವಿಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಕಾಯಕವ ಮಾಡಿದೊಡು ಬಸವೇಶ, ಆವಗಂ ಶರಣರನು ಸೇವಿಪನು ಬಸವೇಶ ಎನ್ನುವ ಅಥಣಿ ಶಿವಯೋಗಿಗಳು ರಚಿಸಿದ ಹೃದಯಗೀತೆಯನ್ನು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ನಿತ್ಯ ಸ್ಮರಿಸುತ್ತಿದ್ದರು ಎಂದರು. ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಮತ್ತು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿದರು. 
ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಚಿತ್ರದುರ್ಗದ ಬಸವಕುಮಾರ ಸ್ವಾಮೀಜಿ, ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಡಿ.ಟಿ.ಅರುಣಕುಮಾರ, ಗಜಾನನ ಮಂಗಸೂಳಿ, ರಾಜು ಸಾಲಿಮಠ, ಎಚ್.ಜಯರಾಮ, ಆನಂದ ಹೊಸೂರ ಇತರರಿದ್ದರು.