ಸುತಗಟ್ಟಿ ಗ್ರಾಮದ ಹೊರ ವಲಯದಲ್ಲಿ ಬೋನಿಗೆ ಬಿದ್ದಿರುವ ಚಿರತೆ
ತಾಲೂಕಿನ ಸುತಗಟ್ಟಿ ಗ್ರಾಮದ ಸಮೀಪಹಲವು ದಿನಗಳಿಂದ ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಯಶಸ್ವಿ ಕಾರ್ಯಾಚರಣೆ ಮೂಲಕ ಸೆರೆ ಹಿಡಿದಿದ್ದಾರೆ. ಚಿರತೆ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಸುತಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಸುತಗಟ್ಟಿ ಗ್ರಾಮದ ಕಾಕತಿ ಅರಣ್ಯ ಪ್ರದೇಶದ ಹೊರವಲಯ, ಕೃಷಿ ಜಮೀನು ಹಾಗೂ ರಸ್ತೆ ಬದಿಯಲ್ಲಿ ಚಿರತೆ ಸಂಚರಿಸುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಬೆಳಗಿನ ಸಮಯ ಹಾಗೂ ಸಂಜೆಯ ವೇಳೆಯಲ್ಲಿ ರೈತರು ಮತ್ತು ಬೈಕ ಸವಾರರಿಗೆ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳನ್ನು ಹಾಗೂ ಮಹಿಳೆಯರನ್ನು ಒಂಟಿಯಾಗಿ ಹೊರಗೆ ಕಳುಹಿಸಲು ಗ್ರಾಮಸ್ಥರು ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿತ್ತು.
ಸತುಗಟ್ಟಿ ಗ್ರಾಮದ ಹೊರವಲಯದಲ್ಲಿ 15 ದಿನಗಳ ಓಡಾಡುತ್ತಿದ್ದ ಚಿರತೆಯನ್ನು ಬುಧವಾರ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
-ಎನ್.ಇ.ಕ್ರಾಂತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ