ಉದ್ಘಾಟನೆ ಕಾಣದ ಚನ್ನಮ್ಮನ ಕಿತ್ತೂರು ಪಟ್ಟಣದ ಪಶುಆಸ್ಪತ್ರೆ.
- ಕಳಪೆ ಕಾಮಗಾರಿ ಆರೋಪ
- ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಹೀಗಾಗಿ, ಜಾನುವಾರುಗಳ ಚಿಕಿತ್ಸೆಗಾಗಿ ರೈತರು ಪರಿತಪಿಸುವಂತಾಗಿದೆ.
ಪಶು ಆಸ್ಪತ್ರೆ ದಶಕಗಳಿಂದ ದುರಸ್ತಿ ಕಾಣದ ಕುರಿತು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿಗೆ ಸರ್ಕಾರ 52 ಲಕ್ಷ ರೂ. ಮಂಜೂರು ಮಾಡಿತ್ತು. ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆಯಾದರೂ ಈವರೆಗೆ ಉದ್ಘಾಟನೆಗೊಂಡಿಲ್ಲ.
ಕಟ್ಟಡ ನಿರ್ಮಾಣ ಆರಂಭವಾದಾಗಿನಿಂದ ಗುತ್ತಿಗೆದಾರ ಯಾರೆಂಬುದು ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೂ 4 ಜನ ಇಂಜಿನಿಯರ್ ಬದಲಾವಣೆಯಾಗಿದ್ದಾರೆ. ಗುತ್ತಿಗೆದಾರ ಯಾರೆಂದು ಕೇಳಿದಾಗ ಪ್ರತಿ ಬಾರಿ ಬೇರೆಬೇರೆ ಹೆಸರು ತಿಳಿಸಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ ಗುತ್ತಿಗೆದಾರ ಉಡಾೆ ಉತ್ತರ ನೀಡುತ್ತಿದ್ದಾನೆ ಎಂಬುದು ಅಧಿಕಾರಿಗಳ ದೂರು.
ಕಳಪೆ ಕಾಮಗಾರಿ: ಅಧಿಕಾರಿಗಳ ಸಲಹೆ ಪಡೆಯದೆ ಗುತ್ತಿಗೆದಾರನ ಅನುಕೂಲಕ್ಕೆ ಅನುಗುಣವಾಗಿ ಪಶು ಆಸ್ಪತ್ರೆ ಕಟ್ಟಡ ನಿರ್ಮಿಸಿದ್ದು, ಕಟ್ಟಡ ಕಳಪೆ ಗುಣಮಟ್ಟದಿಂದ ಕೂಡಿದೆ. ಅಲ್ಪಾವಧಿಯಲ್ಲೇ ಗೋಡೆಗಳು ಬಿರುಕುಬಿಟ್ಟಿವೆ. ಕಟ್ಟಡದ ಸ್ಥಳ ಕಂದಕಗಳಿಂದ ಕೂಡಿತ್ತು. ಹೀಗಾಗಿ, ಗೋಡೆ ಯಾವಾಗ ಕುಸಿಯುವುದೋ ಎಂಬ ಆತಂಕ ಕಾಡುತ್ತಿದೆ.
ಪಶು ಆಸ್ಪತ್ರೆಗಳಿಗೆ ಒಬ್ಬನೇ ಗುತ್ತಿಗೆದಾರ!: ರಾಜ್ಯದಲ್ಲಿ ಸರ್ಕಾರ ಮಂಜೂರು ಮಾಡಿದ ಹೊಸ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರಿನ ಕರ್ನಾಟಕ ಸ್ಟೇಟ್ ಹೆಬಿಟೇಟ್ ಸೆಂಟರ್ ಕಂಪನಿ ಗುತ್ತಿಗೆ ಪಡೆದು ಬೇರೆ-ಬೇರೆ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಿದೆ. ಗುತ್ತಿಗೆದಾರರು ಕಳಪೆ ಕಟ್ಟಡ ನಿರ್ಮಿಸಿ ಕೈತೊಳೆದುಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪಶುಆಸ್ಪತ್ರೆ ಉದ್ಘಾಟಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೂರವಾಣಿ ಮೂಲಕ ಹಲವು ಬಾರಿ ಸಂಪರ್ಕಿಸಿದರೂ ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ. ಈ ಕುರಿತು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ಹಾಗೂ ತಾಪಂ ಇಒ ಗಮನಕ್ಕೆ ತರಲಾಗಿದೆ. ಪಶು ಆಸ್ಪತ್ರೆಗೆ ಹೊಸ ಕಟ್ಟಡ ದೊರೆತರೂ ಪ್ರಯೋಜನವಿಲ್ಲದಂತಾಗಿದೆ.
ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಾಣ ಮಾಡಿರುವ ಪಶು ಆಸ್ಪತ್ರೆ ಕಳಪೆ ಮಟ್ಟದ್ದಾಗಿದೆ. ಈವರೆಗೆ ಉದ್ಘಾಟನೆಯಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಜಾನುವಾರುಗಳ ಚಿಕಿತ್ಸೆಗೆ ಅನುಕೂಲ ಕಲ್ಪಿಸಬೇಕು.