ಬೆಳಗಾವಿ ಎಪಿಎಂಸಿಯಲ್ಲಿ ಗುರುವಾರ ಮಾರಾಟವಾಗದೇ ಉಳಿದಿದ್ದ ತರಕಾರಿ.  
ಬೆಳಗಾವಿ

ತರಕಾರಿಗೆ ತಟ್ಟಿದ ಯುದ್ಧದ ಬಿಸಿ

ಬೆಳಗಾವಿ : ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆಯ ಕಾರಣಕ್ಕೆ ಹೋಟೆಲ್‌ಗಳಲ್ಲಿ ಕೆಲವೊಂದು ಮೆನು ಕಡಿಮೆಯಾಗುತ್ತಿದ್ದಂತೆಯೇ ಅದರ ಪರಿಣಾಮ ನೇರವಾಗಿ ತರಕಾರಿ ಮೇಲಾಗಿದ್ದು, ಗೋವಾದಲ್ಲಿ ಅತೀ ಹೆಚ್ಚು ತರಕಾರಿ ಬೇಡಿಕೆ ಹೊಂದಿದ್ದ ಇಲ್ಲಿನ ಎಪಿಎಂಸಿಯಲ್ಲಿ ರಫ್ತು ಕುಂಠಿತಗೊಂಡಿದ್ದು, ಶೇ.70ರಷ್ಟು ವಹಿವಾಟು ಕುಸಿದಿದೆ.
ಇಲ್ಲಿನ ಎಪಿಎಂಸಿಯಿಂದ ನಿತ್ಯ ಸರಾಸರಿ ಗೋವಾ ಮತ್ತು ಮಹಾರಾಷ್ಟ್ರದ ರತ್ನಾಗಿರಿ, ಕರಾವಳಿ ಭಾಗದ ವಿವಿಧ ನಗರಗಳಿಗೆ ನೂರಕ್ಕೂ ಹೆಚ್ಚು ಲಾರಿಗಳಷ್ಟು ವಿವಿಧ ತರಕಾರಿ ರಫ್ತಾಗುತ್ತಿತ್ತು. ಆದರೆ ಪ್ರಸ್ತುತ ಹೋಟೆಲ್‌ಗಳಲ್ಲಿ ಮೆನು ಕಡಿತಗೊಳಿಸಿರುವುದರಿಂದ ಬೇಡಿಕೆ ಇಲ್ಲದೆ ಕೇವಲ 30-40 ಟ್ರಕ್‌ಗಳಷ್ಟು ಮಾತ್ರ ರಫ್ತಾಗುತ್ತಿದೆ. ಹೀಗಾಗಿ ಸಾಕಷ್ಟು ತರಕಾರಿಗಳು ಎಪಿಎಂಸಿಯಲ್ಲಿಯೇ ಉಳಿಯುವಂತಾಗಿದ್ದು, ದರವೂ ಕುಸಿಯುತ್ತಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಈ ಸಮಸ್ಯೆಯಲ್ಲಿ ಮಧ್ಯಪ್ರವೇಶಿಸಿ ಹೋಟೆಲ್ ಮತ್ತು ಕೃಷಿ ವಲಯವನ್ನು ಉಳಿಸಬೇಕು. ಮಳೆಗಾಲಕ್ಕೂ ಮುಂಚೆ ಕೈಗೆ ಸಿಗುವ ತರಕಾರಿಯನ್ನೇ ರೈತರು ನಂಬಿದ್ದಾರೆ. ಅವರನ್ನು ನಂಬಿ ನಾವು ವ್ಯಾಪಾರ ಮಾಡುತ್ತೇವೆ. ಈಗ ಹೋಟೆಲ್‌ಗಳಿಂದ ನಾವು, ನಮ್ಮಿಂದ ರೈತರು ಸಂಕಷ್ಟ ಎದುರಿಸುವಂತಾಗಿದ್ದು, ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಸಂಘದ ನಿರ್ದೇಶಕ ಸತೀಶ ಪಾಟೀಲ ಆಗ್ರಹಿಸಿದ್ದಾರೆ.